ಉಜಿರೆ, ಜು 24 (DaijiworldNews/PY): ಬೆಳೆಸಿದವರ ಬಳಿ ತಿಳಿದು ಕೋ ಎಂಬ ಪರಿಕಲ್ಪನೆಯಡಿಯಲ್ಲಿ ಕೃಷಿಗೆ ಆಧುನಿಕತೆ ಮತ್ತು ತಂತ್ರಜ್ಞಾನದ ಸ್ಪರ್ಷತೆಯನ್ನು ನೀಡುವ ಮೂಲಕ ಉಜಿರೆಯ ಸನಿಹದ ಕೃಷಿಕರೊಬ್ಬರು ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದಾರೆ.





ತರಕಾರಿ ಬೆಳೆಸಿ, ಬೆಳೆಸಿರುವ ಬಗೆ ಹೇಗೆ, ಯಾರು ಬೆಳೆಸಿದ್ದು ಎಂಬ ವಿವರಗಳೊಂದಿಗೆ ಮಾರುಕಟ್ಟೆಗೆ ತರುತ್ತಾರೆ. “ಬೆಳೆಸಿದವರ ಬಳಿ ತಿಳಿದು ಕೋ ಎಂಬ ಪರಿಕಲ್ಪನೆಯಡಿಯಲ್ಲಿ ಕೃಷಿಗೆ ಆಧುನಿಕತೆ ಮತ್ತು ತಂತ್ರಜ್ಞಾನದ ಸ್ಪರ್ಷತೆಯನ್ನು ನೀಡುವ ಮೂಲಕ ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದಾರೆ ಡಾ. ಸತ್ಯನಾರಾಯಣ ಭಟ್ ಅವರು.
ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕ್ ಇಂಜಿನಿಯರ್ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಭಟ್ ಅವರಿಗೆ ಕೃಷಿ ರಕ್ತಗತವಾಗಿ ಬಂದಿದೆ. ಉಜಿರೆ ಸನಿಹ ಗುರಿಪಳ್ಳ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ಇವರು ಲಾಕ್ಡೌನ್ನಿಂದಾಗಿ ಪೂರ್ಣಪ್ರಮಾಣದ ಕೃಷಿಕರಾಗಿದ್ದು ಮಾತ್ರ ವಿಶೇಷ. ಬೆಳಗಿನಿಂದ ಸಂಜೆಯವರಿಗೆ ತರಕಾರಿ ತೋಟದಲ್ಲಿ ಕಾಲ ಕಳೆಯುವ ಇವರು ಮೊದಲಿಗೆ ಮನೆ ಉಪಯೋಗಕ್ಕೆಂದು ತರಕಾರಿಗಳನ್ನು ಬೆಳೆಸುತ್ತಿದ್ದರು. ಬಳಿಕ ಕುಂಬಳಕಾಯಿಯನ್ನು ಮಾರುಕಟ್ಟೆ ಸರಬರಾಜು ಮಾಡಿದರು. ಮಾರುಕಟ್ಟೆಯಲ್ಲಿ ಮಟ್ಟುಗುಳ್ಳವನ್ನು ಲೇಬಲ್ನೊಂದಿಗೆ ಮಾರಾಟವಾಗುತ್ತಿರುವುದನ್ನು ನೋಡಿದ ಅವರು ತನ್ನ ತರಕಾರಿಯನ್ನು “ನಂದನ” ಎನ್ನುವ ಹೆಸರಿನೊಂದಿಗೆ ಚಾಲ್ತಿಗೆ ತರಲು ಪ್ರಯತ್ನಪಟ್ಟರು.
ಇವರ ಪ್ರಯತ್ನ ಯಶಸ್ವಿಯಾಗಿರುವುದು ಮಾತ್ರವಲ್ಲ, ನಂದನ ಜನಪ್ರಿಯತೆಯತ್ತ ಸಾಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಉಜಿರೆಯ ಜೈನ್ ಸ್ಟೋರ್ನಲ್ಲಿ 1.25ಕ್ವಿಂಟಾಲ್ ಸೌತೆ ಮಾರಾಟವಾಗಿರುವುದೇ ಸಾಕ್ಷಿ. ತರಕಾರಿಗಳನ್ನು ಸಾಂಪ್ರದಾಯಿಕ ವಿಧಾನಗಳಲ್ಲಿ, ಸಾವಯವ, ಡಿ ಕಂಪೋಸ್ ಆದ ಗೊಬ್ಬರವನ್ನೇ ಬಳಸಿ ಬೆಳೆಸುತ್ತಾರೆ. ಕೀಟನಾಶಕಗಳ ಬದಲಿಗೆ ಗೋಮೂತ್ರ ಸಿಂಪಡನೇ ಇನ್ನಿತರ ವಿಧಾನಗಳನ್ನು ನೆಚ್ಚಿಕೊಂಡಿದ್ದಾರೆ. ಇಂಜಿನಿಯರ್ ಆಗಿರುವ ಡಾ.ಭಟ್ ಅವರಿಗೆ ಕೃಷಿ ಈಗ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ.