ಮಂಗಳೂರು, ಏ 18 : ವಿಧಾನ ಸಭಾ ಚುನಾವಣೆಗೆ ಕ್ಷಣ ಗಣನೆ ಪ್ರಾರಂಭವಾಗುತ್ತಿದ್ದಂತೆ, ಮತದಾರನ್ನು ಸೆಳೆಯಲು ಬಿಜೆಪಿ , ಕಾಂಗ್ರೆಸ್ ತನ್ನದೇ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದು, ಇದರ ಭಾಗವಾಗಿ ಪಕ್ಷಗಳ ರಾಷ್ಟ್ರೀಯ ನಾಯಕರು ಮತ್ತೆ ಕರಾವಳಿಗೆ ಆಗಮಿಸಲಿದ್ದಾರೆ.
ಈ ಹಿಂದೆ ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕರಾವಳಿ ಜಿಲ್ಲೆಗೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ನಾಯಕರನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಯಿಸಿಕೊಳ್ಳುವ ಇರಾದೆ ಸ್ಥಳೀಯ ಹಾಗೂ ರಾಜ್ಯ ನಾಯಕರದ್ದು. ಹೀಗಾಗಿ ಶೀಘ್ರದಲ್ಲಿ ರಾಷ್ಟ್ರೀಯ ನಾಯಕರು ಮತ್ತೆ ಆಗಮಿಸುವ ನಿರೀಕ್ಷೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಳ್ಳುತ್ತಿದೆ.
ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಪ್ರಧಾನಿ ಮೋದಿ ಮೇ ಮೊದಲ ವಾರದಲ್ಲಿ ಕರಾವಳಿಗೆ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಯಾವಾಗ ಮತ್ತು ಎಲ್ಲಿ ಎಂಬುದು ಇನ್ನೂ ನಿರ್ಧಾನವಾಗಿಲ್ಲ. ಇನ್ನು ಜನಾಶೀರ್ವಾದ ಯಾತ್ರೆಯಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ರಾಹುಲ್ ಅವರು ಜಿಲ್ಲೆಯ ಹಲವೆಡೆ ಭೇಟಿ ಕೊಟ್ಟು ಮತ ಯಾಚಿಸುವ ಯೋಚನೆ ಮಾಡಿದ್ದಾರೆ.
ಇವರಲ್ಲದೆ, ಮಾಜಿ ಪ್ರಧಾನಿ ದೇವೇಗೌಡ, ಎಚ್ ಡಿ ಕೆ, ಯೋಗಿ ಅದಿತ್ಯನಾಥ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮುಂತಾದವರು ಪ್ರಚಾರಕ್ಕೆ ಆಗಮಿಸುವ ಸಾಧ್ಯತೆ ಇದೆ.