ಮಂಗಳೂರು, ಏ 18: ಸಚಿವ ಬಿ.ರಮಾನಾಥ ರೈ ತಮ್ಮ ’ರಾಜಕೀಯ ಗುರು’ ಜನಾರ್ಧನ ಪೂಜಾರಿ ಅವರನ್ನು ಏ. 18ರ ಬುಧವಾರ ಭೇಟಿ ಮಾಡಿ ಕಾಲಿಗೆರಗಿ ಆಶೀರ್ವಾದ ಪಡೆದರು. ಕಳೆದ ಹಲವು ತಿಂಗಳಿನಿಂದ ಇವರಿಬ್ಬರ ನಡುವಿನ ಸಂಬಂಧ ಹಳಸಿದ್ದು, ಹಲವು ಬಾರಿ ರೈ ವಿರುದ್ದ ಜನಾರ್ಧನ ಪೂಜಾರಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ರೈ ಅವರು ಬಂಟ್ವಾಳ ಕ್ಷೇತ್ರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಲಿದ್ದು ಈ ಕಾರಣದಿಂದ ತಮ್ಮ ರಾಜಕೀಯ ಗುರು ಪೂಜಾರಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ, ಅವರ ಕಾಲಿಗೆರಗಿ ನಮಸ್ಕರಿಸಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಇದೇ ವೇಳೆ ಜನಾರ್ಧನ ಪೂಜಾರಿ ಅವರು ’ಬಂಟ್ವಾಳ ಕ್ಷೇತ್ರದ ಜನರು ಬುದ್ಧಿವಂತರು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಈ ಬಾರಿಯೂ ಅಭಿವೃದ್ಧಿಯ ಪರ ಮತ ಚಲಾಯಿಸುತ್ತಾರೆ. ಭಗವಂತ ನಿಮ್ಮನ್ನು ಕೈ ಬಿಡುವುದಿಲ್ಲ' ಎಂದು ಪೂಜಾರಿ ಅವರು ಹಾರೈಸಿದರು . ಅಷ್ಟೇ ಅಲ್ಲದೆ ರೈ ಅವರು ಹೊರಡುವ ಮುನ್ನ ಅವರೊಂದಿಗೆ ಕಾರಿನವರೆಗೂ ನಡೆದುಕೊಂಡು ಬಂದು ಬೀಳ್ಕೊಟ್ಟರು.