ಕಾಸರಗೋಡು, ಜು. 25 (DaijiworldNews/MB) : ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಆದೇಶ ನೀಡಿದ್ದಾರೆ.

ಮಂಜೇಶ್ವರ, ಕುಂಬಳೆ , ಕಾಸರಗೋಡು, ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಲಾಗಿದೆ.
ಅಗತ್ಯ ವಸ್ತುಗಳು ಮಾರಾಟ ಮಾಡುವ ಅಂಗಡಿ ಮುಂಗಟ್ಟು ಗಳು ಎರಡು ದಿನಗಳಿಗೊಮ್ಮೆ ಬೆಳಿಗ್ಗೆ 11 ರಿಂದ ಸಂಜೆ 5 ರ ತನಕ ಮಾತ್ರ ತೆರೆಯಬಹುದು. ಆಟೋ ರಿಕ್ಷಾ , ಟ್ಯಾಕ್ಸಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಅಗತ್ಯವಿರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ವಾಹನಗಳ ತಪಾಸಣೆಯನ್ನು ಕೂಡಾ ಹೆಚ್ಚಿಸಲಾಗುವುದು. ಗುಂಪುಗೂಡಿದ್ದಲ್ಲಿ ಬಂಧಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಕಾಸರಗೋಡು ನಗರ ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ನಗರದಲ್ಲಿ ವಾಹನ ತಪಾಸಣೆ ಬಿಗುಗೊಳಿಸಿದ್ದು, ಆದೇಶ ಉಲ್ಲಂಘಿಸುವ ವಾಹನಗಳನ್ನು ಮುಟ್ಟುಗೋಲು ಹಾಕಲಾಗುತ್ತಿದ್ದು ಪ್ರಕರಣ ದಾಖಲಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಹೊಸ ನಿಲ್ದಾಣ ಬಸ್ಸು, ಕರಂದಕ್ಕಾಡ್ ಮೊದಲಾದೆಡೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ನಿಯಂತ್ರಿಸಲಾಗುತ್ತಿದೆ.