ಕಾಸರಗೋಡು, ಜು. 25 (DaijiworldNews/MB) : ಜುಲೈ 17 ರಂದು ಚೆಂಗಲ ಪಂಚಾಯತ್ನ 4 ನೇ ವಾರ್ಡ್ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ 43 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರನ್ನು 14 ದಿನಗಳ ಕಾಲ ಸ್ವಯಂ ನಿಗಾದಲ್ಲಿದ್ದು ರೋಗಲಕ್ಷಣ ಕಂಡು ಬಂದ್ದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ (ಡಿಸಿ) ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಕೋವಿಡ್ -19 ನಿಯಮಗಳನ್ನು ಪಾಲಿಸದೆ ವಿವಾಹ ಕಾರ್ಯಕ್ರಮವನ್ನು ನಡೆಸಿದ ವ್ಯಕ್ತಿಯ ವಿರುದ್ಧ ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎರಡು ವರ್ಷದ ಜೈಲು ಶಿಕ್ಷೆ ಮತ್ತು ಆರೋಪಿಗಳಿಗೆ 10,000 ರೂ.ಗಳ ದಂಡ ವಿಧಿಸುವ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಈ ಸೋಂಕು ಹರಡುತ್ತಿರುವುದರಿಂದ ಹೆಚ್ಚು ಜನರು ಒಟ್ಟುಗೂಡುವ ಕಾರ್ಯಕ್ರಮಗಳನ್ನು ನಡೆಸದಂತೆ ಜನರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಶನಿವಾರ ಜಿಲ್ಲೆಯಲ್ಲಿ 105 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಆ ಪೈಕಿ 88 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಹಿಂದಿರುಗಿದ 10 ಜನರಲ್ಲಿ ಮತ್ತು ಇತರ ರಾಜ್ಯಗಳಿಂದ ಆಗಮಿಸಿದ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ.
ಕುಂಬಳೆಯಲ್ಲಿ ಇಪ್ಪತ್ತು, ಮಂಗಲ್ಪಾಡಿಯಲ್ಲಿ 11, ಕಾಂಞಂಗಾಡ್ನಲ್ಲಿ ಏಳು, ಬದಿಯಡ್ಕ, ಉದುಮ, ಬೆಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ತಲಾ ಆರು ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,331 ಜನರು ಸೋಂಕಿಗೆ ಒಳಗಾಗಿದ್ದಾರೆ. ಶನಿವಾರ 23 ಮಂದಿ ಗುಣಮುಖರಾಗಿದ್ದು ಈವರಗೆ ಒಟ್ಟು 719 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 608 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.