ಸುಳ್ಯ, ಜು 26 (Daijiworld News/MSP): ಮಕ್ಕಳಿಬ್ಬರು ಸೇರಿ ಆಹಾರಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ಜು.24 ರ ಗುರುವಾರ ನಾಲ್ಕೂರು ಗ್ರಾಮದ ಅಂಜೇರಿಯಿಂದ ನಡೆದಿದೆ.

ತಂದೆ, ಹೊನ್ನಪ್ಪ ನಾಯ್ಕ ಅಂಜೇರಿ ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬಿಬ್ಬರು ತಂದೆಗೆ ವಿಷವುಣಿಸಿದ್ದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪುತ್ರ ಲೊಕೇಶ್ ಹೊನ್ನಪ್ಪರವರ ಮನೆ ಬಳಿಯಲ್ಲೇ ವಾಸವಿದ್ದು, ಮತ್ತೊಬ್ಬ ಪುತ್ರ ದೇವಿಪ್ರಸಾದ್ ಗುತ್ತಿಗಾರಿನಲ್ಲಿ ವಾಸವಿದ್ದಾರೆ. ಜು.23 ರ ರಾತ್ರಿ ಹೊನ್ನಪ್ಪರವರ ಮನೆಯಲ್ಲಿ ಮಾಂಸದಡುಗೆ ಮಾಡಿದ್ದು ಊಟ ಮಾಡಿ ಮಲಗಿದ್ದರು. ರಾತ್ರಿ ದೇವಿಪ್ರಸಾದ್ ಎಂಬವರು ಅಡುಗೆಗೆ ವಿಷ ಬೆರೆಸಿದ್ದು, ಲೊಕೇಶ್ ಕೂಡಾ ಸಹಕರಿಸಿದ್ದಾರೆಂದು ದೂರಲಾಗಿದೆ. ಜು.24 ರ ಬೆಳಗ್ಗೆ ಹೊನ್ನಪ್ಪ ಅವರು ಮಾಂಸದ ಪದಾರ್ಥ ಸೇವಿಸಿದ್ದು ಬಳಿಕ ವಾಂತಿ ಮಾಡಿಕೊಂಡಿದ್ದಾರೆ. ತೀವ್ರ ಅಸ್ವಸ್ಥ ಗೊಂಡಾಗ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಚೇತರಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಹೊನ್ನಪ್ಪ ಅವರ ಪತ್ನಿ ಇಬ್ಬರು ಪುತ್ರರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.