ಮಂಗಳೂರು, ಜು. 26 (DaijiworldNews/MB) : ವಿದೇಶದಿಂದ ಬಂದವರು ಈವರೆಗೂ ಕಡ್ಡಾಯವಾಗಿ 7 ದಿನಗಳ ಕಾಲ ಹೊಟೇಲ್ ಕ್ವಾರಂಟೈನ್ಗೆ ಒಳಗಾಗಬೇಕಿತ್ತು. ಆದರೆ ಇನ್ನು ಮುಂದೆ ವಿದೇಶದಿಂದ ಬರುವವರು 7 ದಿನಗಳ ಕಾಲ ಹೊಟೇಲ್ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ.

ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಗೆ ಮಾಹಿತಿ ನೀಡಿರುವ ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರತ್ನಾಕರ್ ಅವರು, ''ಅಂತರ್ ರಾಷ್ಟ್ರೀಯ ಪ್ರಯಾಣಿಕರು ಅಂದರೆ ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಹೊಟೇಲ್ಗೆ ಕರೆತರಲಾಗುವುದು. ಬಳಿಕ ಒಂದು ದಿನ ಹೊಟೇಲ್ನಲ್ಲಿ ಇರುತ್ತಾರೆ. ಅದರ ಮರುದಿನವೇ ನಮ್ಮ ತಂಡ ಹೋಗಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸುವುದು. ಇದರಿಂದಾಗಿ ಅರ್ಧ ಗಂಟೆಯಲ್ಲೇ ಸ್ವಾಬ್ನ ವರದಿ ಲಭ್ಯವಾಗುತ್ತದೆ. ಒಂದು ವೇಳೆ ವರದಿ ನೆಗೆಟಿವ್ ಬಂದ್ದಲ್ಲಿ ಅವರನ್ನು ಅಲ್ಲಿಂದ ಮನೆಗೆ ಕಳುಹಿಸಲಾಗುವುದು. ಹಾಗಾಗಿ ವಿದೇಶದಿಂದ ಬಂದವರು 7 ದಿನಗಳ ಕಾಲ ಹೊಟೇಲ್ ಕ್ವಾರಂಟೈನ್ಗೆ ಒಳಗಾಗಬೇಕಾದ ಅವಶ್ಯಕತೆಯಿಲ್ಲ. ಆದರೆ ಮನೆಗೆ ಹೋದ ಬಳಿಕ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಬೇಕು'' ಎಂದು ತಿಳಿಸಿದ್ದಾರೆ.
''ಹಾಗೆಯೇ ಈ ಮೊದಲು ಮಹಾರಾಷ್ಟ್ರದಿಂದ ಬರುವವರಿಗೆ ಹೊಟೇಲ್ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ನಿಯಮವಿದ್ದು ಆ ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ. ಈ ಪ್ರಕಾರವಾಗಿ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದಿಂದ ಬಂದವರಿಗೆ ಯಾವುದೇ ಹೊಟೇಲ್ ಕ್ವಾರಂಟೈನ್ ಮಾಡುವುದಿಲ್ಲ. ಅವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡುತ್ತೇವೆ. ಈ ದಿನಗಳಲ್ಲಿ ಯಾವುದಾದರು ರೋಗ ಲಕ್ಷಣಗಳು ಕಂಡು ಬಂದರೆ ಅವರ ಸ್ವಾಬ್ ಟೆಸ್ಟ್ ಮಾಡಲಾಗುವುದು'' ಎಂದು ಹೇಳಿದ್ದಾರೆ.