ಕಾಸರಗೋಡು, ಜು. 26 (DaijiworldNews/MB) : ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ 43 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ನಿರ್ಬಂಧನೆ ಉಲ್ಲಂಘಿಸಿ ವಿವಾಹ ಸತ್ಕಾರ ಮಾಡಿದ ಕಾರಣದಿಂದಾಗಿ ಬದಿಯಡ್ಕ ಪೀಲಾಂಕಟ್ಟೆಯ ಅಬೂಬಕ್ಕರ್ ಎಂಬವರ ವಿರುದ್ಧ ಸಾಂಕ್ರಮಿಕ ರೋಗ ನಿಯಂತ್ರಣ ಕಾಯ್ದೆಯಂತೆ ಪ್ರಕರಣ ದಾಖಲು ಮಾಡಲಾಗಿದೆ.

ಜುಲೈ 17 ರಂದು ಚೆಂಗಲ ಪಂಚಾಯತ್ನ 4 ನೇ ವಾರ್ಡ್ನಲ್ಲಿ ಈ ವಿವಾಹ ನಡೆದಿದ್ದು ವಧು, ವರ ಸೇರಿದಂತೆ ಈ ವಿವಾಹದಲ್ಲಿ ಭಾಗಿಯಾದ 43 ಮಂದಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.
ಶನಿವಾರ ಜಿಲ್ಲೆಯಲ್ಲಿ 105 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಆ ಪೈಕಿ 43 ಮಂದಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದವರು ಆಗಿದ್ದರು. ಈ ಕಾರಣ ನಿರ್ಬಂಧನೆ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಇದೀಗ ನಿರ್ಬಂಧನೆ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ ನಡೆಸಿದ ಬದಿಯಡ್ಕ ಪೀಲಾಂಕಟ್ಟೆಯ ಅಬೂಬಕ್ಕರ್ ಅವರ ವಿರುದ್ಧ ಸಾಂಕ್ರಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.