ಕುಂದಾಪುರ, ಜು 26 (Daijiworld News/MSP): ಇತ್ತೀಚೆಗಷ್ಟೇ ಆರಂಭಿಸಿದ್ದ ಸ್ಥಳಿಯ ವ್ಯಕ್ತಿಯೊಬ್ಬರ ಮೀನಿನಂಗಡಿಯ ಮೇಲ್ಮಾಡಿನ ಕಬ್ಬಿಣದ ಪೈಪಿಗೆ ನೇಣು ಬಿಗಿದು ವಿವಾಹಿತ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೂಲತಃ ಸಾಗರದವನಾದ ಸದ್ಯ ದೇವಲ್ಕುಂದ ತಟ್ಟೆಗೊಡ್ಲು ಎಂಬಲ್ಲಿನ ಪತ್ನಿಯ ನಿವಾಸದಲ್ಲಿ ವಾಸವಿದ್ದ ಸುಬ್ರಮಣ್ಯ ಪೂಜಾರಿ (36) ಆತ್ಮಹತ್ಯೆಗೆ ಶರಣಾದಾತ.
ಸುಬ್ರಮಣ್ಯ ಪೂಜಾರಿ ದೇವಲ್ಕುಂದ ಮೂಲದ ಯುವತಿಯನ್ನು ವಿವಾಹವಾದ ಬಳಿಕ ಪತ್ನಿಯ ನಿವಾಸದಲ್ಲೇ ಇದ್ದು ಮೊದಲಿಗೆ ಡ್ರೈವಿಂಗ್ ಕೆಲಸ ಬಳಿಕ, ಇಲೆಕ್ಟ್ರೀಶಿಯನ್ ಸೇರಿ ಕೂಲಿ ಕಾರ್ಯಗಳನ್ನು ಮಾಡಿಕೊಂಡಿದ್ದ. ವಿಪರೀತ ಕುಡಿತದ ಚಟವುಳ್ಳ ಆತ ಆಗ್ಗಾಗೆ ಮನೆಯಲ್ಲೂ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ.
ಶನಿವಾರ ರಾತ್ರಿ ಹಟ್ಟಿಯಂಗಡಿ ಸಮೀಪದ ಮೀನಿನಂಗಡಿಗೆ ಆಗಮಿಸಿದ ಆತ ಯಾವುದೋ ಕಾರಣಕ್ಕೆ ಜಿಗುಪ್ಸೆಗೊಂಡು ನೇಣಿಗೆ ಕೊರಳೊಡ್ಡಿರಬಹುದು ಎಂದು ಗುಮಾನಿಯಿದೆ. ಬೆಳಿಗ್ಗೆ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ಸುಬ್ರಮಣ್ಯ ಪತ್ನಿ ಹಾಗೂ ಎಂಟು ವರ್ಷದ ಗಂಡು ಮಗನಿದ್ದ.
ಘಟನ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಭಾರ ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.