ಮಂಗಳೂರು, ಏ 19: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮೊಯ್ದೀನ್ ಬಾವಾ ಅವರಿಗೆ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರು ಬಂಡಾಯವೆದ್ದಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯಕುಮಾರ್ ಶೆಟ್ಟಿ, ನನಗೆ ಈ ಹಿಂದೆ ಎಂಎಲ್ಸಿ ಕೊಡುವುದಾಗಿ ಹೇಳಿದ್ದರು ಬಳಿಕ ಜಿಲ್ಲಾಧ್ಯಕ್ಷ ಸ್ಥಾನ ಕೊಡುವುದಾಗಿ ಹೇಳಿದ್ದರು. ಆದರೆ ಅದ್ಯಾವುದನ್ನೂ ಕೊಟ್ಟಿಲ್ಲ. ಇದೀಗ ಎಂಎಲ್ಎ ಸ್ಥಾನಕ್ಕೂ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ನೊಂದಿರುವ ನಾನು ಬೆಂಬಲಿಗರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ಸಂದರ್ಭ ಹೇಳಿಕೆ ನೀಡಿರುವ ಕಾಂಗ್ರೆಸ್ನ ಇನ್ನೋರ್ವ ಮುಖಂಡ, ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ ಅವರ ಪ್ರತಿಕ್ರಿಯೆ ನೀಡಿ ಅವರಿಗೆ ನೋವಾಗಿರುವುದು ಸಹಜ. ಅವರು ಕರೆದಿರುವ ಸಭೆಯಲ್ಲಿ ಇಂದು ನಾನು ಪಾಲ್ಗೊಳ್ಳುತ್ತೇನೆ. ಅವರನ್ನು ಕಾಂಗ್ರೆಸ್ನಲ್ಲೇ ಉಳಿಸಿಕೊಳ್ಳುವಂತೆ ಯತ್ನಿಸುತ್ತೇನೆ ಎಂದಿದ್ದಾರೆ.