ಉಳ್ಳಾಲ, ಜು. (DaijiworldNews/SM): ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿದ ಕೆಲವೇ ಗಂಟೆಗಳಲ್ಲಿ ತಂಡವೊಂದು ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದ ಮೇಲಂಗಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.

ಉಳ್ಳಾಲ ಮೇಲಂಗಡಿ ನಿವಾಸಿ ರಿಫಾಯಿಝ್(25) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಉಳ್ಳಾಲ ನಿವಾಸಿ ಜಲ್ದಿ ಇರ್ಫಾನ್ ಮತ್ತು ಜುಲ್ವಾನ್ ಎಂಬವರು ಕೃತ್ಯ ಎಸಗಿದ್ದಾರೆ. ಭಾನುವಾರ ಮಧ್ಯಾಹ್ನ 12ರ ವೇಳೆಗೆ ಮನೆ ಹೊರಗಡೆ ಬಂದ ತಂಡ ಹೊರಗೆ ಕರೆದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ವಾಪಸ್ಸು ಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಪೊಲೀಸರು ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಎಷ್ಟು ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ಬೆದರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ರಿಫಾಯಿಝ್ ತೊಕ್ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಗಳಿಂದ ಕೃತ್ಯ:
ಕೊಲೆ ಯತ್ನಕ್ಕೆ ಒಳಗಾದ ರಿಫಾಯಿಝ್ ಜು.೨೫ರಂದು ಶನಿವಾರ ಉಳ್ಳಾಲ ದರ್ಗಾ ಬಳಿ ನಿಂತಿದ್ದ ಸಂದರ್ಭ ಕಡಪ್ಪುರ ನಿವಾಸಿ ಶಮೀರ್, ಅರ್ಫಾನ್ ಮತ್ತು ಇತರೆ ಆರು ಮಂದಿ ಸೇರಿಕೊಂಡು ‘ನಿನ್ನನ್ನು ಮತ್ತು ಮನೆ ಮಂದಿಯನ್ನು ಕೊಲ್ಲುತ್ತೇವೆ. ಈ ಹಿಂದೆ ಟಾರ್ಗೆಟ್ ಇಲ್ಯಾಸ್ ನನ್ನು ಮನೆ ಒಳಕ್ಕೆ ನುಗ್ಗಿ ಕೊಲೆ ನಡೆಸಿದ ರೀತಿಯಲ್ಲೇ ಕೊಲೆ ನಡೆಸುತ್ತೇವೆ. ಇಡೀ ಕುಟುಂಬವನ್ನೇ ಸರ್ವನಾಶ ಮಾಡುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದಾರೆ.
ಬಳಿಕ ರಿಫಾಯಿಝ್ ನನ್ನು ಒತ್ತಾಯಪೂರ್ವಕವಾಗಿ ಕಾರೊಂದರ ಬಳಿ ಕರೆದೊಯ್ದು ಅದರೊಳಗಿದ್ದ ತಲವಾರು, ಮಾರಕಾಸ್ತ್ರಗಳನ್ನು ತೋರಿಸಿ ತಲೆ ತೆಗೆಯುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ರಿಫಾಯಿಝ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನ್ನನ್ನು ಹಾಗೂ ಕುಟುಂಬವನ್ನು ರಕ್ಷಿಸುವಂತೆ ದೂರು ದಾಖಲಿಸಿದ್ದಾರೆ. ಆದರೆ ದೂರು ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಗಳು ದೂರು ನೀಡಿದ ದ್ವೇಷವನ್ನು ತೀರಿಸಿಕೊಂಡಿದ್ದಾರೆ. ಈ ಹಿಂದೆಯೂ ದಾವುದ್ ಮತ್ತು ಶಮೀರ್ ಎಂಬವರ ತಂಡ ರಿಫಾಯಿಝ್ ಮನೆಗೆ ನುಗ್ಗಿ ದಾಳಿ ನಡೆಸಿ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿ ನಡೆಸಿತ್ತು.