ಮಂಗಳೂರು, ಜು 27 (DaijiworldNews/PY): ಕಾಂಗ್ರೆಸ್ ಕಾರ್ಯಕರ್ತರೊಬ್ಬರ ತಾಯಿ ಕೊರೊನಾದಿಂದ ಮೃತಪಟ್ಟಿದ್ದು, ಮೃತರ ಮುಖಕ್ಕೆ ಹಾಕಿದ ಹೊದಿಕೆಯನ್ನು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ತೆಗೆಯಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ಈ ಸಂದರ್ಭ ಮಾಜಿ ಸಚಿವ ಹಾಗೂ ಶಾಸಕ ಯು. ಟಿ.ಖಾದರ್ ಅವರು ಕೂಡಾ ಇದ್ದರು ಎನ್ನಲಾಗಿದೆ.

ವಿಡಿಯೋವೊಂದರಲ್ಲಿ, ಪಿಪಿಇ ಕಿಟ್ಗಳನ್ನು ಧರಿಸಿದ ಕೆಲವು ಸಿಬ್ಬಂದಿಗಳೊಂದಿಗೆ ಕಾಂಗ್ರೆಸ್ ನಾಯಕರು ಮೃತರ ಶವದ ಸುತ್ತಲು ಸಾಲುಗಟ್ಟಿ ನಿಂತಿದ್ದು, ಮೃತದೇಹಕ್ಕೆ ಹಾಕಲಾದ ಹೊದಿಕೆಯನ್ನು ತೆಗೆದು ಹಾಕಿದ್ದಾರೆ. ಇದು ಮೃತರ ಅಂತ್ಯಕ್ರಿಯೆ ಸಂದರ್ಭ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎನ್ನುವ ಆರೋಪಗಳಿವೆ.
ಈ ವಿಡಿಯೋವನ್ನು ಖಾದರ್ ಅವರ ಅಭಿಮಾನಿಗಳ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿದೆ. ಈ ಘಟನೆಯು ಜು 24ರ ಶುಕ್ರವಾರದಂದು ಬೋಳೂರಿನ ಸ್ಮಶಾನದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರ ತಾಯಿ ಮೃತಪಟ್ಟಿದ್ದು, ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು ಎನ್ನಲಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ಇತರ ಪಕ್ಷದ ಕೆಲವು ಮುಖಂಡರು ಬೋಳೂರಿನ ಸ್ಮಶಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೃತರ ದೇಹವನ್ನು ನೆಲದ ಮೇಲೆ ಇರಿಸಲಾಗಿದ್ದು, ಮುಖದ ಮೇಲಿನ ಹೊದಿಕೆಯನ್ನು ತೆಗೆದು ಅಂತಿಮ ದರ್ಶನ ಮಾಡಿದ್ದಾರೆ. ಬಳಿಕ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಕೊಂಡೊಯ್ದಿದ್ದಾರೆ.
ಕೊರೊನಾ ಮಾರ್ಗಸೂಚಿಯ ಪ್ರಕಾರ, ಮೃತರ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯುವಂತಿಲ್ಲ. ಈ ಘಟನೆಯ ಬಗ್ಗೆ ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.