ಕಾಸರಗೋಡು, ಜು. 27 (DaijiworldNews/MB) : ''ಜಿಲ್ಲೆಯ ಮೂಲಕ ಹಾದುಹೋಗುವ ತರಕಾರಿ, ಹಣ್ಣು, ಮೀನು ಇತ್ಯಾದಿ ಸರಕು ವಾಹನಗಳಿಗೆ ತಡೆ ಮಾಡುವುದಿಲ್ಲ'' ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕರ್ನಾಟಕದಿಂದ ವಾಹನಗಳ ಮೂಲಕ ತರಲಾಗುವ ಹಣ್ಣು, ತರಕಾರಿ, ಮೀನು ಇತ್ಯಾದಿಗಳನ್ನು ಗಡಿಪ್ರದೇಶಗಳಲ್ಲಿ ಜಿಲ್ಲೆಯ ಇತರ ವಾಹನಗಳಿಗೆ ಹೇರಿಕೆ ನಡೆಸಬೇಕು. ಮಾಸ್ಕ್, ಗ್ಲೌಸ್ ಧರಿಸುವಿಕೆ, ಸಾನಿಟೈಸರ್ ಬಳಕೆ ಸಹಿತ ಆರೋಗ್ಯ ಇಲಾಖೆಯ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಿ ಸರಕು ಹೇರಿಕೆ ಮತ್ತು ಇಳಿಕೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಿ, ವಾಹನ ವಶಪಡಿಸಲಾಗುವುದು. ಸರಕು ಹೇರಿಕೊಂಡು ಬರುವ ವಾಹನಗಳಿಗೆ ಗಡಿಯಿಂದ ಮುಂದಕ್ಕೆ ಜಿಲ್ಲೆಗೆ ಪ್ರವೇಶ ಮಂಜೂರಾತಿ ಇಲ್ಲ.
ಜಿಲ್ಲೆಯ ಗಡಿಯಲ್ಲಿ ತರಕಾರಿ ಇತ್ಯಾದಿ ಸರಕು ಹೇರಿಕೆ, ಇಳಿಕೆ ನಡೆಸುವ ವಾಹನಗಳ ಚಾಲಕ, ಇತರ ಕಾರ್ಮಿಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ವಾರಕ್ಕೊಮ್ಮೆ ಹಾಜರಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಖಚಿತಪಡಿಸಿ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು ಎಂದು ಅವರು ನುಡಿದರು.