ಕಾಸರಗೋಡು, ಜು 27 (DaijiworldNews/PY): ಕರ್ನಾಟಕ ಮೆಡಿಕಲ್, ಇಂಜಿನಿಯರಿಂಗ್ ಪ್ರವೇಶಾತಿ (ಕಿಂಸ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಜು.30, 31ರಂದು ಈ ಪರೀಕ್ಷೆಗಳು ನಡೆಯಲಿದ್ದು, ಕಾಞಂಗಾಡು ಹಾಗೂ ಕಾಸರಗೋಡಿನಿಂದ ತಲಪ್ಪಾಡಿ ಗಡಿಪ್ರದೇಶವರೆಗೆ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ಗಳ ಸಂಚಾರ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತೆಯೊಂದಿಗೆ ನಡೆಸಿದ ಮಾತುಕತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆ.1ರಂದು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರಕಾರ ವಾಹನ ಸೌಲಭ್ಯ ಒದಗಿಸಿದರೆ ಅಂದು ಕಾಸರಗೋಡು ಜಿಲ್ಲಾಡಳಿತೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಲಿದೆ ಎಂದವರು ನುಡಿದರು.
ಪರೀಕ್ಷೆಗೆ ಹಾಜರಾಗಿ ಮರಳುವ ವೇಳೆ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನ ರೂಂ ಕ್ವಾರಂಟೈನ್ ನಡೆಸಬೇಕು. ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಜೊತೆಯಾಗಿ ತೆರಳಲು ಅನುಮತಿ ಪಡೆದಿರುವ ಪೋಷಕರೂ 14 ದಿನಗಳ ರೂಂ ಕ್ವಾರಂಟೈನ್ ಪಾಲಿಸಬೇಕು. ಖಾಸಗಿ ವಾನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುವುದಿದ್ದಲ್ಲಿ ಅಭ್ಯಂತರವಿರುವುದಿಲ್ಲ. ಆದರೆ ಪರೀಕ್ಷೆಗೆ ಹಾಜರಾಗಿ ಮರಳಿ ಬರುವ ವೇಳೆ ಕೊರೊನಾ ಜಾಗ್ರತಾ ಪೋರ್ಟಲ್ನಲ್ಲಿ ನೋಂದಣಿ ನಡೆಸಿರಬೇಕು. ಇವರಿಗೂ 14 ದಿನಗಳ ರೂಂ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.