ಮಂಗಳೂರು, ಜು. 27 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಸಾವುಗಳೆಲ್ಲಾ ಕೊರೊನಾದಿಂದ ಆಗುತ್ತಿರುವಂತಹದ್ದೆ ಅಥವಾ ಬೇರೆ ಖಾಯಿಲೆಯಿಂದಾಗಿ ಸಾವನ್ನಪ್ಪಿದವರ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟು ಕೊರೊನಾ ಸಾವು ಎಂದು ಹೇಳಲಾಗುತ್ತಿರುವುದೋ ಎಂಬ ಪ್ರಶ್ನೆ ಹುಟ್ಟುತ್ತಿದೆ. ಜಿಲ್ಲಾಡಳಿತ ಭಾನುವಾರ ಸಂಜೆಯವರೆಗೆ ನೀಡಿರುವ ಅಂಕಿ ಅಂಶ ಪ್ರಕಾರವಾಗಿ ಜಿಲ್ಲೆಯಲ್ಲಿ 123 ಜನರು ಕೊರೊನಾದಿಂದ ಸಾವನ್ನಪ್ಪಿದ್ದು ಕಳೆದ ಮೂರು ದಿನದಲ್ಲೇ 23 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಇತರೆ ಖಾಯಿಲೆಯಿಂದಾಗಿ ಸೋಂಕಿತರು ಸಾವನ್ನಪ್ಪುತ್ತಿದ್ದಾರಾ? ಅಥವಾ ಸೋಂಕು ಬಂದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾರಾ? ಎಂಬ ಪ್ರಶ್ನೆ ಹುಟ್ಟುತ್ತಿದೆ.

ಸುಮಾರು 60 - 70 ವರ್ಷಕ್ಕಿಂತ ಮೇಲ್ಪಟ್ಟವರು ಹೆಚ್ಚಾಗಿ ಕೊರೊನಾದಿಂದ ಸಾವನ್ನಪ್ಪಿದ್ದು ಈ ಪೈಕಿ ಕಿಡ್ನಿ, ಲಿವರ್, ಬ್ಲಡ್ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆ ಮೊದಲಾದವುಗಳಿಂದ ಬಳಲುತ್ತಿದ್ದರು ಹೆಚ್ಚಾಗಿದ್ದಾರೆ. ಸಾವನ್ನಪ್ಪಿದವರಿಗೆ ಈ ಖಾಯಿಲೆಗಳು ಪ್ರಾಥಮಿಕ ಕಾರಣವಾಗಿದ್ದು, ಕೊರೊನಾ ದ್ವಿತೀಯ ಕಾರಣವಾಗಿದೆ. ಹಾಗಾಗಿ ಈವರೆಗೆ ಕೊರೊನಾ ಸೋಂಕು ಇದ್ದು ಸಾವನ್ನಪ್ಪಿದವರು ಇತರ ಖಾಯಿಲೆಗಳಿಂದಲ್ಲೂ ಕೂಡಾ ಬಳಲುತ್ತಿದ್ದರು ಎಂಬುವುದು ಗಮನಾರ್ಹವಾಗಿದೆ.
ಆಸ್ಪತ್ರೆಗೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಬಳಿಕ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಡುತ್ತದೆ. ಹಾಗಾದರೆ ಇಲ್ಲಿ ಇರುವ ಮೊದಲ ಪ್ರಶ್ನೆ ಈ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿರುವುದೋ ಅಥವಾ ಹೃದಯಾಘಾತದಿಂದಲ್ಲೋ ಎಂಬುದು ಆಗಿದೆ.
ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಯೊಂದಿಗೆ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್ ಅವರು ಮಾತನಾಡಿದ್ದು, ''ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಂದು ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 60 - 70 ವಯಸ್ಸಿನವರಾಗಿದ್ದಾರೆ. ಹಾಗೆಯೇ ಈ ಪೈಕಿ ಕಿಡ್ನಿ, ಲಿವರ್, ಶ್ವಾಸಕೋಶ ಸಮಸ್ಯೆ ಇರುವವರು, ಹೃದಯಾಘಾತವಾಗಿರುವವರು, ಬ್ಲಡ್ ಕ್ಯಾನ್ಸರ್ ಆಗಿರುವವವರು ಕೂಡಾ ಇದ್ದಾರೆ. ಹಾಗಾಗಿ ಕೊರೊನಾ ಎನ್ನುವುದು ದ್ವಿತೀಯ ಕಾರಣವಾಗುತ್ತದೆ. ಪ್ರಾಥಮಿಕ ಕಾರಣ ಬೇರೆ ಆಗಿರುತ್ತದೆ. ಕ್ಯಾನ್ಸರ್ನ ಕೊನೆಯ ಹಂತದಲ್ಲಿರುವ ವ್ಯಕ್ತಿಗೆ ಕೊರೊನಾ ಬಂದಿಲ್ಲದಿದ್ದರೂ ಸಾವನ್ನಪ್ಪುವುದು ಖಂಡಿತ. ಕ್ಯಾನ್ಸರ್ ಸಾವಿಗೆ ಪ್ರಾಥಮಿಕ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಕೊರೊನಾ ಎಂದು ನಾಮಕರಣ ಮಾಡುವುದು ಸರಿಯಲ್ಲ'' ಎಂದು ಹೇಳಿದ್ದಾರೆ.
''ಕಳೆದ ಎರಡು ವರ್ಷಗಳನ್ನು ನೋಡಿದಾಗ ಈ ವರ್ಷ ನಮ್ಮಲ್ಲಿ ಹೆಚ್ಚಿನ ಸಾವುಗಳು ಆಗಿಲ್ಲ. ಹಾಗಾಗಿ ಯಾರೂ ಕೂಡಾ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಶೇ 70 ರಿಂದ ಶೇ. 80 ಜನರಿಗೆ ರೋಗದ ಲಕ್ಷಣಗಳೇ ಇಲ್ಲ. ಕೆಲವರಿಗೆ ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದಿದೆ. ದೈಹಿಕವಾಗಿ ಸದೃಢರಾಗಿದ್ದರೆ ಕೂಡಲೇ ಕೊರೊನಾದಿಂದ ಗುಣಮುಖರಾಗುತ್ತಾರೆ. ಆದ್ದರಿಂದ ಎಲ್ಲಾ ಸಾವುಗಳು ಕೊರೊನಾದಿಂದ ಅಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಕೊರೊನಾ ಬಂದರೆ ನಾವು ಸಾವನ್ನಪ್ಪುತ್ತೇವೆ ಎಂಬ ಆತಂಕಕ್ಕೆ ಒಳಗಾಗಬಾರದು ಎಂಬುದು ನನ್ನ ಮನವಿ'' ಎಂದು ತಿಳಿಸಿದ್ದಾರೆ.
''ಕೇವಲ ಕೆಲವು ಪ್ರಕರಣಗಳು ನೈಜ್ಯವಾಗಿ ಕೊರೊನಾದಿಂದ ಸಾವನ್ನಪ್ಪಿದ್ದು ಅಧಿಕ ಪ್ರಕರಣಗಳು ಇತರ ಖಾಯಿಲೆಯಿಂದ ಆಗಿದೆ'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.