ಬೆಂಗಳೂರು, ಏ 19: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ, ಮತದಾನ ಪ್ರಮಾಣವನ್ನು ಹೆಚ್ಚಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಚುನಾವಣಾ ಆಯೋಗ, ಹೊಸ ಹೊಸ ಕಸರತ್ತು ಮಾಡುತ್ತಿವೆ. ಮೇ 12 ಹೇಗೂ ಚುನಾವಣೆ ದಿನ, ರಜೆ ಇದೆ ಸಿನಿಮಾ ನೋಡಿಕೊಂಡು, ಶಾಪಿಂಗ್ ಮಾಡಿಕೊಂಡು ಬರೋಣ ಎನ್ನುವ ಪ್ಲ್ಯಾನ್ ಹಾಕೊಂಡವರಿಗೆ ಶಾಕ್ ಕೊಡಲು ಮುಂದಾಗಿದೆ. ಮುಂದಿನ ಐದು ವರ್ಷಕ್ಕೆ ರಾಜ್ಯವನ್ನು ಆಳುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬದಲು ರಜೆ ಸಿಕ್ಕಿತೆಂದು ಮಜಾ ಮಾಡಲು ಹೊರಟವರಿಗೆ ಈ ರೀತಿ ಬಿಸಿ ಮುಟ್ಟಿಸುವ ಆಲೋಚನೆ ಚುನಾವಣಾ ಆಯೋಗದ್ದು.
ಸಾಂದರ್ಭಿಕ ಚಿತ್ರ
ಗರಿಷ್ಟ ಮತದಾನವಾಗಬೇಕು ಎಂದು ಪ್ರಯತ್ನಿಸುತ್ತಿರುವ, ಆಯೋಗ ಅದಕ್ಕಾಗಿಯೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. .ಜಾಹೀರಾತು ಮೂಲಕ, ಸೆಲೆಬ್ರಿಟಿಗಳ ಮಾತಿನ ಮೂಲಕ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ.
ಆದರೂ, ಮತದಾನದ ದಿನ ಮತದಾರರು ಶಾಪಿಂಗ್ ಮತ್ತು ಸಿನಿಮಾ ಎಂದು ಹೋಗುವುದನ್ನು ತಡೆಯಲು ಹೊಸದೊಂದು ಉಪಾಯ ಕಂಡು ಹುಡುಕಿರುವ ಮತದಾನದ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಶಾಪಿಂಗ್ ಮಾಲ್ ಗಳಿಗೆ ಬೀಗ ಹಾಕುವ ಕುರಿತು ಯೋಚನೆ ಮಾಡಿದೆ. ಈ ಕುರಿತಂತೆ ಚುನಾವಣಾ ಆಯೋಗ ಮೌಖಿಕವಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಕೇಂದ್ರ ಆಯೋಗ ಅಧಿಕೃತವಾಗಿ ಅನುಮೋದನೆ ನೀಡಿದರೆ ಮೇ.12ರ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಗಳಿಗೆ ಬೀಗ ಹಾಕುವ ಸಾಧ್ಯತೆ ಇದೆ.