ಮಂಗಳೂರು, ಜು 27 (DaijiworldNews/PY): ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕೊರತೆ ಇದೆ. ಅಗತ್ಯಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡಬೇಕೆಂದು ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.


ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳನ್ನುದ್ದೇಶಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ವೆಂಟಿಲೇಟರ್ಗಳ ಕೊರತೆಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆರು ವೆಂಟಿಲೇಟರ್ಗಳಿದ್ದರೆ ವೆನ್ಲಾಕ್ನಲ್ಲಿ ಎಲ್ಲಾ ವೆಂಟಿಲೇಟರ್ಗಳು ಭರ್ತಿಯಾಗಿವೆ. ಆಸ್ಪತ್ರೆಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕೊರೊನಾ ಪರಿಸ್ಥಿತಿಯ ಸಂದರ್ಭ ನಗರ ಪಾಲಿಕೆಯು ಜನರ ಸೇವೆಗಾಗಿ ಕನಿಷ್ಠ ಹತ್ತು ಆಂಬುಲೆನ್ಸ್ಗಳನ್ನು ಸಿದ್ದವಾಗಿರಿಸಬೇಕು ಎಂದು ಸಲಹೆ ನೀಡಿದರು. ರೋಗಿಯ ಕುಟುಂಬವು ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾದರೆ ಕೆಲವು ನಿಯಮಗಳಿವೆ. ಶುಲ್ಕ ಹೆಚ್ಚು ಇರುವ ಕಾರಣ ಬಡವರಿಗೆ ಶುಲ್ಕ ಪಾವತಿ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ನಗರ ಪಾಲಿಕೆಯು ಕನಿಷ್ಠ ಹತ್ತು ಆಂಬುಲೆನ್ಸ್ಗಳನ್ನು ಸಿದ್ಧವಾಗಿಡಬೇಕು ಎಂದು ತಿಳಿಸಿದರು.
ಬೆಳಗಾಂನ ಆಸ್ಪತ್ರೆಯ ಶುಲ್ಕವು ದಿನಕ್ಕೆ 35,000 ರಿಂದ 75,000 ವರೆಗೆ ಇದೆ. ಈ ಶುಲ್ಕವನ್ನು ಬಡವರಿಗೆ ಭರಿಸಲಾಗದು ಹಾಗೂ ಶುಲ್ಕ ದರವನ್ನು ನಿಯಂತ್ರಿಸಲು ಕೂಡಾ ಆಗುವುದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸೋಂಕಿನಿಂದ ಪ್ರತಿದಿನ ಎಂಟರಿಂದ ಹತ್ತು ಮಂದಿ ಸಾವನ್ನಪ್ಪುತ್ತಾರೆ. ಸಾವಿನ ಬಗ್ಗೆ ತನಿಖೆ ನಡೆಸಲು ಒಂದು ತಂಡ ಬಂದಿತ್ತು. ಆದರೆ, ಅದರ ವರದಿ ಎಲ್ಲಿದೆ? ಅವರು ಸಾವಿನ ಬಗ್ಗೆ ತನಿಖೆ ನಡೆಸಿದ ವರದಿ ತೋರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕೊರೊನಾ ಸೋಂಕಿತರ ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆಗೆ ಕೂಡಾ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಮೃತದೇಶವನ್ನು ನೋಡಲು ಯಾರಿಗೂ ಅನುಮತಿ ಇಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಿಬ್ಬಂದಿಗಳು ಮೃತದೇಹದ ಮೇಲಿರುವ ಹೊದಿಕೆಯನ್ನು ತೆಗೆದು ಕುಟುಂಬಸ್ಥರಿಗೆ ಅಂತಿಮ ದರ್ಶನ ಮಾಡುವುದು, ಅಂತ್ಯ ಸಂಸ್ಕಾರಕ್ಕೆ ಸಂಬಂಧಪಟ್ಟಂತೆ ಹೇಳುವ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಇದು ವಿರುದ್ದವಾಗಿದೆ. ಸಾವಿನ ಬಳಿಕ ಕೊರೊನಾ ಹರಡದ ಕಾರಣ ಭಯಪಡುವ ಅವಶ್ಯಕತೆ ಇಲ್ಲ ಎಂದು ಎಲ್ಲಾ ವೈದ್ಯರು ಹೇಳುತ್ತಾರೆ. ಈ ಬಗ್ಗೆ ಭಯವಿದ್ದಲ್ಲಿ ಸರ್ಕಾರವು ಮಾರ್ಗಸೂಚಿಯಲ್ಲಿ ಬದಲಾವಣೆ ತರಬಹುದು ಎಂದರು.
ಕೊರೊನಾ ನಿಯಂತ್ರಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿಯು ಸಹಾಯವಾಣಿಯನ್ನು ರಚಿಸಿದ್ದು, ಇದು ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ, ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕವಿತಾ ಸನಿಲ್ ಮತ್ತು ಇತರರು ಉಪಸ್ಥಿತರಿದ್ದರು.