ಬಂಟ್ವಾಳ , ಏ 19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಹಾಗೂ ಅನುಭವಿ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಎಂದು ಘೋಷಿಸಲಾಗಿರುವ ಕಾಂಗ್ರೆಸ್ನ ಬಿ ರಮಾನಾಥ ರೈ ಇಂದು ೮ನೇ ಬಾರಿಗೆ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಅವರು ಬಳಿಕ ಬಂಟ್ವಾಳ ಮಿನಿವಿಧಾನ ಸೌಧಕ್ಕೆ ತೆರಳಿ ಚುನಾವಣಾಧಿಕಾರಿಗಳಿಗೆ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಾರ್ವಜನಿಕರ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಂದರ್ಭ ಮಾತನಾಡಿದ ಅವರು ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಒಳ್ಳೆಯ ದಿನವಾಗಿದೆ. ಮಂಗಳ ಕಾರ್ಯಕ್ಕೆ ಶುಭದಿನ ಆಗಿರುವುದರಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದರು. ನನ್ನ ಪಾಲಿಕೆ ಕಾಂಗ್ರೆಸ್ ಪಕ್ಷ ಧರ್ಮವಾಗಿದೆ. ಇನ್ನೊಂದು ಧರ್ಮವನ್ನು ಪ್ರೀತಿಸುವುದೇ ನಿಜವಾದ ಹಿಂದೂ ಧರ್ಮವಾಗಿದೆ ಎಂದರು. ಜನಾರ್ದನ ಪೂಜಾರಿ ಚುನಾವಣೆಗೆ ನಿಂತಾಗಲೂ ನಾನು ಬಹಳಷ್ಟು ದುಡಿದಿದ್ದೇನೆ ಎಂದರು.
ಇನ್ನು ಪ್ರತಿಸ್ಪರ್ಧಿಯಾಗಿ ರಾಜೇಶ್ ಶೆಟ್ಟಿ ಉಳಿಪಾಡಿ ಚುನಾವಣೆ ಎದುರಿಸಲಿದ್ದಾರೆ. ಇವರಿಗೆ ಸಂಸದ ನಳಿನ್ ಕುಮಾರ್ ಬೆಂಬಲವಿದೆ. ಇನ್ನು ರಮಾನಾಥ ರೈ 7 ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಸೋಲುಂಡಿದ್ದಾರೆ. 1985ರಿಂದ ಗೆಲ್ಲುತ್ತ ಬಂದಿದ್ದ ರೈ, 2004ರಲ್ಲಿ ಬಿಜೆಪಿಯ ಬಿ.ನಾಗರಾಜ ಶೆಟ್ಟಿ ವಿರುದ್ಧ ಸೋತಿದ್ದರು. ಇದು ಬಿಟ್ಟರೆ ಮತ್ತೆಲ್ಲ ಗೆಲುವಿನ ಪರ್ವವೇ. ಆದರೆ 8ನೇ ಬಾರಿ ಹಣಾಹಣಿಗೆ ಸಿದ್ಧವಾಗಿರುವ ಇವರಿಗೆ ಪ್ರಸಕ್ತ ಬಾರಿ ಕಠಿಣ ಸವಾಲುಗಳಿರುವುದಂತು ಸುಳ್ಳಲ್ಲ.