ಕಾಸರಗೋಡು, ಜು 28 (Daijiworld News/MSP): ಕರ್ನಾಟಕದಲ್ಲಿ ಜುಲೈ 30 ಮತ್ತು 31ರಂದು ಸಿಇಟಿ ಮೆಡಿಕಲ್ ಪ್ರವೇಶ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಕಾಸರಗೋಡು ಜಿಲ್ಲೆಯಿಂದ ಹಾಜರಾಗಿ ಪರೀಕ್ಷೆ ಎದುರಿಸಿ ಕಾಸರಗೋಡು ಜಿಲ್ಲೆಗೆ ಮರಳುವ ವಿದ್ಯಾರ್ಥಿಗಳು, ಏಳು ದಿನಗಳ ಕಾಲ ಹೋಂ ಕ್ವಾರಂಟೈನ್’ಗೆ ಒಳಗಾಗಬೇಕಿದ್ದು, 5 ನೇ ದಿನ ಕೊರೊನಾ ಆಂಟಿಜೆನ್ ತಪಾಸಣೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಗೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಎರಡು ದಿನಗಳ ಮುಂಚೆಯೇ ಕೇಂದ್ರಗಳನ್ನ ಸ್ಯಾನಿಟೈಸ್ ಮಾಡಿ, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲು ಸರ್ಕಾರ ಸಿದ್ದವಾಗಿದೆ. ಇದರೊಂದಿಗೆ ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೂ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲಾ, ಜಿಲ್ಲಾಧಿಕಾರಿಗಳು ಪರೀಕ್ಷೆ ಎದುರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಿದ್ದಾರೆ.
ಇನ್ನು ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಗೆ ತಲಪಾಡಿವರೆಗೆ ತೆರಳಲು ಪ್ರತ್ಯೇಕ ಕೆ.ಎಸ್ ಆರ್ ಟಿಸಿ ಬಸ್ ಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲಿಂದ ಕರ್ನಾಟಕ ಸರ್ಕಾರವೂ ಒದಗಿಸಿರುವ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳಬಹುದು. ಆದರೆ ಪರೀಕ್ಷಾರ್ಥಿಗಳು ಬೇರೆ ಸಾರ್ವಜನಿಕ ಸಂಚಾರ ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸಜಿತ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 127 ಸ್ಥಳಗಳ 497 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.