ಮಂಗಳೂರು, ಜು. 28 (DaijiworldNews/MB) : ವಾಟ್ಸಾಪ್ ಗುಂಪಿನ ಸದಸ್ಯರೊಬ್ಬರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು ಇದರ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲೆಯಲ್ಲಿ ಜಾನುವಾರು ಸಾಗಣೆದಾರರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮಾತನಾಡಿ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದು ಇದರ ಬಗ್ಗೆ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ನಡೆದಿದ್ದು ಈ ಸಂದರ್ಭದಲ್ಲಿ ವ್ಯಕ್ತಿಯೋರ್ವ ತುಳು ಭಾಷೆಯಲ್ಲಿ ಕೊಲೆ ಬೆದರಿಕೆ ಹಾಕಿದ್ದು ಹಿಂದುತ್ವ ಅಥವಾ ಹಿಂದೂ ದೇವರುಗಳಿಗೆ ಯಾರಾದರೂ ಹಾನಿ ಮಾಡಿದ್ದಲ್ಲಿ ಜೀವವನ್ನು ತೆಗೆಯಲು ಅಥವಾ ಜೀವವನ್ನು ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಜಿಲ್ಲಾಡಳಿತ, ಸಾಮಾಜಿಕ ಜಾಲತಾಣಗಳಲ್ಲಿ ಜಾನುವಾರು ಸಾಗಾಣಿಕೆಗೆ ಸಂಬಂಧಿಸಿದಂತೆ ಅನೇಕರು ಗೊಂದಲ ಉಂಟು ಮಾಡುತ್ತಿರುವುದು ಕಂಡುಬಂದಿರುತ್ತದೆ. ಯಾವುದೇ ಅಕ್ರಮ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಪೊಲೀಸರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕೋರಿದೆ.
ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅರುಣಾಂಗ್ಶು ಗಿರಿ, ಕೊಲೆ ಬೆದರಿಕೆ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದು ಈಗಾಗಲೇ ತನಿಖೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
"ಡಿಸಿ ದೂರು ಸಲ್ಲಿಸಿದರೆ, ನಾವು ಅದನ್ನು ಸ್ವೀಕರಿಸುತ್ತೇವೆ. ಇಲ್ಲದಿದ್ದರೆ, ನಾವು ಸೊಮೋಟೋ ಪ್ರಕರಣವನ್ನು ದಾಖಲಿಸುವ ಮೂಲಕ ತನಿಖೆ ನಡೆಸುತ್ತೇವೆ. ಈ ಘಟನೆಯನ್ನು ನಾವು ಕಡೆಗಣಿಸುವುದಿಲ್ಲ ಎಂದು ಹೇಳಿದ್ದಾರೆ.