ಮಂಗಳೂರು, ಏ 20: ಯಾವುದೇ ಜಾತಿ, ಧರ್ಮ, ಪಕ್ಷ ಭೇದ ಮರೆತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತೇನೆ ಎಂದು ಶಾಸಕ ಮೊಯ್ದೀನ್ ಬಾವಾ ಹೇಳಿದರು.
ಕವಿತಾ ಸನಿಲ್ ನೇತೃತ್ವದಲ್ಲಿ ಪಚ್ಚನಾಡಿ ವಾರ್ಡ್ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಈ ಬಾರಿ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಕೇಳಲಿದೆ. ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ರಸ್ತೆ ವಿಸ್ತರಣೆ, ಒಳಚರಂಡಿ ಯೋಜನೆ, ಕುಡಿಯುವ ನೀರು ಮತ್ತಿತರ ಸೌಲಭ್ಯ ಒದಗಿಸಲಾಗಿದೆ. ಸುರತ್ಕಲ್ ನಲ್ಲಿ ಅತ್ಯುತ್ತಮ ಸೌಲಭ್ಯದ ಮಾರುಕಟ್ಟೆ ನಿರ್ಮಾಣವಾಗುತ್ತಿದೆ ಎಂದರು.
ಮಂಗಳೂರು ಉತ್ತರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ ಮಾತನಾಡಿ, ಮೊಯ್ದೀನ್ ಬಾವಾ ಅವರು ಶಾಸಕರಾಗಿ ಆಯ್ಕೆಯಾಗಿ ನಗರ ಪ್ರದೇಶದ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವೇಗವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮ ಮುಂದೆ ಇದೆ. ಅನುದಾನವನ್ನು ವಿವಿಧ ಇಲಾಖೆಗಳಿಗೆ ತಾವೇ ಖುದ್ದಾಗಿ ಹೋಗಿ ಬಿಡುಗಡೆಗೊಳಿಸುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದಾರೆ ಎಂದರು.
ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಳೆದ ಬಾರಿ ಹೆಚ್ಚಿನ ಸ್ಥಾನ ಗಳಿಸಿದ್ದು ಈ ಬಾರಿಯೂ ಮಂಗಳೂರು ಉತ್ತರ ಸೇರಿದಂತೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು ಕಾಂಗ್ರೆಸ್ ಜಯಗಳಿಸಿ ಉತ್ತಮ ಆಡಳಿತ ನೀಡುವಂತಾಗ ಬೇಕು. ಇದಕ್ಕೆ ಕಾರ್ಯಕರ್ತರ ಕೊಡುಗೆ ಬೇಕಾಗಿದೆ. ಸರಕಾರದ ಅಭಿವೃದ್ಧಿಯ ಕಾರ್ಯಗಳನ್ನು ಮತದಾರನಿಗೆ ಮನ ಮುಟ್ಟುವಂತೆ ವಿವರಿಸಬೇಕು ಎಂದರು.
ಈ ಸಂದರ್ಭ ಮಾಜಿ ಮೇಯರ್ ಶಶಿಧರ ಹೆಗ್ಡೆ, ಉಪ ಮೇಯರ್ ಮೊಹಮ್ಮದ್, ಹಿಲ್ಡಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.