ಏ 20 : ನನ್ನ ಸೊಸೆ ಪಾಕ್ ಬೇಹು ಸಂಸ್ಥೆ ಐಎಸ್ಐ ಕೈವಶವಾಗಿದ್ದಾಳೆ ಎಂದು ಗರ್ಶಂಕರ್ ಎಂಬ ಗ್ರಾಮದಲ್ಲಿ ಸಿಕ್ಖ್ ಧಾರ್ಮಿಕ ಬೋಧಕರಾಗಿರುವ ತಾರ್ಸೇಮ್ ಸಿಂಗ್ ಆಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನನ್ನ ಸೊಸೆ ಕಿರಣ್ ಬಾಲಾ ಯಾತ್ರಿಕಳಾಗಿ ಪಾಕಿಸ್ಥಾನಕ್ಕೆ ತೆರಳಿದ್ದು ಇದೀಗ ಅಲ್ಲಿ ಮತಾಂತರಗೊಳಿಸಿ ಕಿರಣ್ ಬಾಲಾ ಪಾಕ್ ಬೇಹು ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ ನವರು ಕೈವಶ ಮಾಡಿಕೊಂಡಿದ್ದಾರೆ ಎಂದು ತಾರ್ಸೇಮ್ ಆರೋಪಿಸಿದ್ದಾರೆ.
31 ವರ್ಷ ಪ್ರಾಯದ ಸಿಕ್ಖ್ ವಿವಾಹಿತ ಮಹಿಳೆ ಕಿರಣ್ ಬಾಲಾ, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸಿಕ್ಖ್ ನಿಯೋಗದ ಭಾಗವಾಗಿ ಬೈಶಾಖೀ ಹಬ್ಬದಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನಕ್ಕೆ ತೆರಳಿದ್ದರು. ಆದರೆ ದಿನ ಕಳೆದರೂ ಹಿಂತಿರುಗಾದ ಅವರು, ಅಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ಲಾಹೋರ್ನ ವ್ಯಕ್ತಿಯೋರ್ವನನ್ನು ಮದುವೆಯಾಗಿರುವುದಾಗಿ ತಾರ್ಸೇಮ್ ಹೇಳಿದ್ದಾರೆ.
ಕಿರಣ್ ಬಾಲಾ , ಮಾವ ತಾರ್ಸೇಮ್ ಅವರನ್ನು ಎ.16ರಂದು ಸಂಪರ್ಕಿಸಿ, " ತಾನು ಲಾಹೋರ್ ಮೂಲದ ವ್ಯಕ್ತಿ ಮೊಹಮ್ಮದ್ ಆಜಂ ಎಂಬಾತನನ್ನು ವಿವಾಹವಾಗಿದ್ದು, ಇದಕ್ಕೂ ಮುನ್ನ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿಯೂ, ಪರಿಣಾಮ ಆಮ್ನಾ ಬೀಬಿ ಎಂಬ ಹೊಸ ಹೆಸರನ್ನು ತನಗೆ ಇಡಲಾಗಿರುವುದಾಗಿಯೂ ಫೋನಿನಲ್ಲಿ ತನಗೆ ತಿಳಿಸಿದ್ದಳು. ಎಂದು ತಾರ್ಸೇಮ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಶೀಘ್ರವೇ ತನ್ನ ಸೊಸೆಯನ್ನು ಅಲ್ಲಿಂದ ಪಾರು ಮಾಡಿ , ಭಾರತಕ್ಕೆ ಕರೆತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೆರವಾಗಬೇಕು ಆಗ್ರಹ ವ್ಯಕ್ತಪಡಿಸಿದ್ದಾರೆ.