ಬಂಟ್ವಾಳ, ಸೆ21 : ಕಸ್ಬಾ ಗ್ರಾಮದಲ್ಲಿ ಪುರಸಭೆ ಕಾನೂನು ಬಾಹಿರ ಕೆಲಸಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ವಿಪಕ್ಷ ಬಿಜೆಪಿ ಸದಸ್ಯರು ಪುರಸಭಾ ಜಗಲಿಯಲ್ಲಿ ಧರಣಿ ಕೂತಿದ್ದಾರೆ.
ಕಸ್ಬಾ ಗ್ರಾಮ ಪೇಟೆಯಲ್ಲಿರುವ ಕದ ನಂಬರ್ 8/240 ಕಟ್ಟಡದ ವಿರುದ್ದ ನೀಡಲಾದ ದೂರಿನ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳವ ನಿರ್ಣಯವನ್ನು ವಾರಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡರೂ ಇನ್ನೂ ಕೂಡ ನಿರ್ಣಯ ಪುಸ್ತಕದಲ್ಲಿ ದಾಖಲಿಸದಿರುವುದನ್ನು ಖಂಡಿಸಿ ವಿಪಕ್ಷ ಬಿಜೆಪಿ ಸದಸ್ಯರು ನಿನ್ನೆ ಸಂಜೆ ಪುರಸಭಾ ಜಗಲಿಯಲ್ಲಿ ಹಠಾತ್ ಧರಣಿ ಕುಳಿತ ಪ್ರಸಂಗ ನಡೆದಿತ್ತು. ಧರಣಿಯ ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ಪುರಂದರ್ ಹೆಗ್ಡೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ, ನಿನ್ನೆ ಧರಣಿಯನ್ನು ಕೈಬಿಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಸಭೆ ಕರೆಯದೇ ಇರುವುದರಿಂದ ಮತ್ತೆ ಬಿಜೆಪಿ ಸದಸ್ಯರು ಪುರಸಭಾ ಜಗಲಿಯಲ್ಲಿ ಧರಣಿ ಕೂತಿದ್ದಾರೆ.
ಪುರಸಭೆಯಲ್ಲಿ ಕಾನೂನು ಬಾಹಿರ ಕೆಲಸಗಳೇ ನಡೆಯುತ್ತಿದೆ. ಸಾಮಾನ್ಯ ಸಭೆಯಲ್ಲಿ ಎಲ್ಲಾ ಅನಧಿಕ್ರತ ಕಟ್ಟಡಗಳ ವಿರುದ್ದ ಮತ್ತು 8/240 ನಂಬರ್ ಕಟ್ಟಡದ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ಬಗ್ಗೆ ಇನ್ನು ಕೂಡ ನಿರ್ಣಯ ಪುಸ್ತಕದಲ್ಲಿ ದಾಖಲಿಸದಿರುವುದು ಕಂಡುಬಂದಿದೆ ಎಂದು ಧರಣಿ ಕುಳಿತಿರುವ ಸದಸ್ಯರು ಆರೋಪಿಸಿದ್ದಾರೆ.