ಬೆಳ್ತಂಗಡಿ, ಜು 31 (DaijiworldNews/PY): ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯ ಮೇಲೆ ಆಕೆಯ ಪತಿ ಗಂಭೀರವಾದ ಹಲ್ಲೆ ಮಾಡಿದ ಘಟನೆ ಶುಕ್ರವಾರ ಸಂಜೆ ಗೇರುಕಟ್ಟೆಯ ಸಮೀಪ ನಡೆದಿದೆ.

ಹಲ್ಲೆಗೊಳಗಾದ ಆಶಾಕಾರ್ಯಕರ್ತೆ ಭವಾನಿ ಹಾಗೂ ಆರೋಪಿಯನ್ನು ಕಳಿಯ ಗ್ರಾಮದ ಪೆಲತ್ತಳಿಕೆ ನಿವಾಸಿ ಸುರೇಶ್ ಎನ್ನಲಾಗಿದೆ. ಈತ ಪತ್ನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಹಲ್ಲೆ ನಡೆಸಿದ ಪರಿಣಾಮ ಭವಾನಿ ಅವರ ತಲೆಗೆ ಗಂಭೀರವಾದ ಗಾಯವಾಗಿದೆ. ಕೊರೊನಾ ವೈರಸ್ ಹಿನ್ನೆಲೆ ಮನೆ ಮನೆ ಭೇಟಿ ನೀಡಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಸುರೇಶ್ ಇವರನ್ನು ಅಡ್ಡಗಟ್ಟಿದ್ದು, ಹಲ್ಲೆ ಮಾಡಿದ್ದಾನೆ. ಅಲ್ಲದೇ, ಜೊತೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯ ಮೇಲೆಯೂ ಹಲ್ಲೆ ಮಾಡಲು ಯತ್ನಿಸಿದ್ದ ಸಂದರ್ಭ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಆತನನ್ನು ತಡೆದಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಧಾವಿಸಿದ್ದು, ಗಾಯಾಗೊಂಡಿದ್ದ ಭವಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೌಟುಂಬಿಕ ವೈಮನಸ್ಸು ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಭವಾನಿ ಅವರು ಪತಿಯನ್ನು ತೊರೆದು ತನ್ನ ತಾಯಿ ಮನೆಯಾದ ಪುದುವೆಟ್ಟಿನಲ್ಲಿ ವಾಸಿಸುತ್ತಿದ್ದು, ಇವರಿಗೆ ಇಬ್ಬರು ಅವಳಿ ಪುತ್ರಿಯರಿದ್ದಾರೆ.