ಬೆಳ್ತಂಗಡಿ, ಜು 31 (DaijiworldNews/PY): ಜನರು ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದು ಅವರಿಗೆ ರಕ್ಷಣೆ ಕೊಡುವ ಬದಲು ವೈದ್ಯಕೀಯ ಉಪಕರಣ ಖರೀದಿಯಲ್ಲಿ ಲೂಟಿ ಮಾಡುವ ಬಿಜೆಪಿ ಸರಕಾರ ಇದನ್ನು ಕಾಂಗ್ರೆಸ್ ಪ್ರತಿಪಕ್ಷವಾಗಿ ಜನರ ಮುಂದೆ ಇಡುತ್ತಿದ್ದಂತೆ ಸರಕಾರ ಭ್ರಮೆ ನಿರಸನಗೊಂಡು ಜನರ ಹಾದಿ ತಪ್ಪಿಸಲು ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದು ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂಬ ಬೆದರಿಕೆ ತಂತ್ರವನ್ನು ಉಪಯೋಗಿಸುತ್ತಿದೆ. ವಿಡಿಯೋ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ ಎಂತೆಂತ ಸವಾಲುಗಳನ್ನು ಗೆದ್ದಿದ್ದೇನೆ ವೀಡಿಯೋ ಬಿಡುಗಡೆಯ ಬೆದರಿಕೆಯನ್ನು ಎದುರಿಸಲು ಸಿದ್ಧ ಎಂದು ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಮಧ್ಯೆ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭವ್ಯಸ್ವಾಗತ ಸ್ವೀಕರಿಸಿದ ಬಳಿಕ ಮಾಜಿ ಶಾಸಕ ಕೆ. ವಸಂತ ಬಂಗೇರರವರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ದಾಖಲೆಗಳನ್ನು ಇಟ್ಟುಕೊಂಡೇ ಆರೋಪ ಮಾಡಿದ್ದು ಇಂತಹ ಕೆಲವು ದಾಖಲೆಗಳು ಮಾಧ್ಯಮದಲ್ಲಿಯೂ ಬಿಡುಗಡೆಗೊಂಡಿದೆ. ದುಪ್ಪಟ್ಟು ವೆಚ್ಚದಲ್ಲಿ ಖರೀದಿ ಮಾಡಿದ್ದೇವೆ ಎಂದು ಸರಕಾರದ ಖಜಾನೆಯಿಂದ ಹಣ ಪಡೆದಿದ್ದು ಮತ್ತೆ ಕೆಲವೊಂದು ಉಪಕರಣಗಳನ್ನು ಬಾಡಿಗೆಗೆ ಖರೀದಿಸಿದ ದಾಖಲೆಗಳು ನಮ್ಮಲ್ಲಿವೆ. ಯೋಗೀಶ್ವರ್ ನನ್ನ ಕಾಲು ಹಿಡಿದು ಬೇಡಿಕೊಂಡಿದ್ದಾನೆ ಎಂದು ಆರೋಪಿಸಿದ್ದು ಇದಕ್ಕೆ ಪತ್ಯುತ್ತರ ನೀಡಿದ ಯೋಗೀಶ್ವರ್ ಡಿ.ಕೆ.ಶಿಯವರ ಮನೆಯಲ್ಲಿ ಮತ್ತು ರಸ್ತೆಯಲ್ಲಿ ಸಿಸಿ ಕ್ಯಾಮರಾ ಇದೆ ತಾಕತ್ತಿದ್ದರೆ ಬಿಡುಗಡೆ ಮಾಡಲಿ ಎಂದು ಆರೋಪಿಸಿದ್ದಾರೆ ಎಂದು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿ ತಕ್ಷಣ ವಿಡಿಯೋ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಕರಾವಳಿ ಭಾಗದಲ್ಲಿ ಇರುವಂತಹ ಅಟೋ ಚಾಲಕರಲ್ಲಿ ಆಶಾಕಾರ್ಯಕರ್ತೆಯರಿಗೆ ಇನ್ನಿತರ ಕುಲಕಸುಬು ಮಾಡುತ್ತಿರುವವರಿಗೆ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡ ಸರಕಾರ ಇದುವರೆಗೂ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ಸರಕಾರಕ್ಕೆ ಕೆಲಸ ಮಾಡುವ ಇಚ್ಚಾಶಕ್ತಿ ಇದ್ದರೆ ಪಂಚಾಯತ್ ಮೂಲಕ ಹಣ ಬಿಡುಗಡೆ ಮಾಡಿ ನೀಡಿ ಇಂತಹ ಕುಟುಂಬಗಳಿಗೆ ನೆರವು ನೀಡಬಹುದಿತ್ತು. ಆದರೆ ನಿರ್ವಹಣೆಯಲ್ಲಿ ವಿಫಲತೆಯನ್ನು ಕಂಡ ಸರಕಾರದ ನಡವಳಿಕೆ ಈ ಭಾಗದ ಜನರಿಗೆ ಅರ್ಥವಾಗಿದ್ದು ಇದನ್ನು ಇನ್ನಷ್ಟು ತಿಳಿಯಲು ಕರಾವಳಿ ಭಾಗಕ್ಕೆ ಭೇಟಿ ನೀಡಿದ್ದೇನೆ ಎಂದರು.
ನೆರೆ ಬಂದು ಒಂದು ವರ್ಷವಾದರೂ ಮನೆ ಕಟ್ಟಲು, ಇನ್ನಿತರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ, ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಅನಾಹುತವಾಗಿದ್ದು ಇಲ್ಲಿಯೂ ಕೂಡ ಪರಿಹಾರ ನೀಡಿಲ್ಲ ಎಂದು ಇಲ್ಲಿನ ನಮ್ಮ ಪಕ್ಷದ ಮುಖಂಡರಿಂದ ತಿಳಿಯಿತು. ಇದೇ ಸ್ಥಿತಿ ರಾಜ್ಯಾದ್ಯಂತ ಇದ್ದು ನೊಂದವರ ಪರ ಕಾಂಗ್ರೆಸ್ ನಿಂತು ಸರಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಹಿರಿಯರಾದ ಆಸ್ಕರ್ ಫೆರ್ನಾಂಡೀಸ್, ಜನಾರ್ಧನ ಪೂಜಾರಿ, ಇವರ ಆರೋಗ್ಯ ಕ್ಷೇಮ ವಿಚಾರಿಸಲು ಬಂದಿದ್ದು ಜೊತೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪ್ರಾರ್ಥನೆಗಾಗಿ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆಯಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದೇನೆ. ಮಂಜುನಾಥನ ಆಶಿರ್ವಾದದಂತೆ ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಮಾನಾಥ ರೈ, ಕೆ.ಗಂಗಾಧರ ಗೌಡ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿ, ಮುಖಂಡರುಗಳಾದ ಸುದರ್ಶನ್ ಜೈನ್ ಬಂಟ್ವಾಳ, ಮನೋಹರ್ ಕುಮಾರ್ ಎ, ಮೋಹನ್ ಕಲ್ಮಂಜ, ರಾಯ್, ಗಫೂರ್, ಪ್ರವೀಣ್, ಬಿ.ಕೆ ವಸಂತ, ಚಂದು ಎಲ್, ಅನಿಲ್ ಪೈ, ಮೊದಲಾದವರು ಉಪಸ್ಥಿತರಿದ್ದರು.