ಮಂಗಳೂರು, ಜು 31 (DaijiworldNews/PY):ಕೊರೊನಾ ಸೋಂಕಿತರಿಂದ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಹಣ ಮಸೂಲು ಮಾಡುವುದು ಕಂಡಬಂದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ವಾರ್ಡ್ ಮಟ್ಟ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಅಲ್ಲದೇ, ಮುಂದಿನ ಹಂತದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರು ಸೇರಿದಂತೆ ವಿದ್ಯಾವಂತರ ನೆರವಿನಿಂದ ಸ್ಥಳೀಯ ಕಾರ್ಯಪಡೆಗಳನ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 142 ಮಂದಿ ಮೃತಪಟ್ಟಿದ್ದಾರೆ. 2561 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಹಾಗೂ 2800 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 415 ಕೊರೊನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿರುವ 61 ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ 4,608 ಹಾಸಿಗೆಗಳು ಸಿದ್ದವಾಗಿವೆ. ಇದರಲ್ಲಿ 662 ಸೋಂಕಿತರ ಚಿಕಿತ್ದೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜನರ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭ ಮಾಡುವ ಉದ್ದೇಶವಿದೆ. ಸರ್ಕಾರದ ನಿಯಮಾವಳಿಯ ವ್ಯಾಪ್ತಿಯೊಳಗೆ ಗಡಿ ಭಾಗದ ಜನರ ಸಮಸ್ಯೆ ಪರಿಹರಿಸಲು ಗಮನ ನೀಡುವುದಾಗಿ ತಿಳಿಸಿದರು.