ಮಂಗಳೂರು, ಏ 20: ಜಮ್ಮುಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸುವ ಸಂದರ್ಭ ನಾನು ಮಂಗಳೂರಿನವಳು ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೆ ಯುವತಿಯೊಬ್ಬಳು ತಿರುಗೇಟು ನೀಡಿದ್ದಾಳೆ.
ನಮಗೆ ಎಲ್ಲೇ ಹೋದರೂ ಮಂಗಳೂರಿನವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಮಂಗಳೂರು ಮತ್ತು ಮಂಗಳೂರಿನ ಜನರ ಬಗ್ಗೆ ನೀವು ಸುಮ್ಮನೆ ಯಾವುದೇ ಆರೋಪ ಮಾಡಬೇಡಿ ಎಂದು ಯುವತಿ ಎಚ್ಚರಿಕೆ ನೀಡಿದ್ದಾಳೆ.
ನಾಲ್ಕು ಜನರನ್ನು ಒಲಿಸಲು, ಮತದ ಮೇಲಿನ ಆಸೆಯಿಂದ ನಮ್ಮ ಮಂಗಳೂರಿನ ಬಗ್ಗೆ ಕೀಳಾಗಿ ಮಾತನಾಡಬೇಡಿ. ನಾವೆಲ್ಲರೂ ಹುಟ್ಟಿ ಬೆಳೆದ ಊರು ಮಂಗಳೂರು. ನೀವು ಕೂಡ ಇದೇ ಊರಿನಲ್ಲಿ ಹುಟ್ಟಿದ್ದೀರಿ. ಹಾಗಾಗಿ ಈ ಊರಿನ ಬಗ್ಗೆ ಕೆಟ್ಟದಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಹಿಂದೂ ಬಿಜೆಪಿ ಎಂದು ಹೇಳಿದ್ದೀರಿ. ಹಿಂದೂ ಬಿಜೆಪಿ ಎಂದು ಹೇಳುವ ಬಗ್ಗೆ ಅಗತ್ಯವಿರಲಿಲ್ಲ. ನೀವು ಬಿಜೆಪಿಯ ಬಗ್ಗೆ ಮಾತನಾಡಿ. ಆದರೆ ಹಿಂದೂ ಬಿಜೆಪಿ, ಬಿಜೆಪಿ ಹಿಂದೂ ಎಂದು ಹೇಳಬೇಡಿ. ನಾವು ಯಾವತ್ತೂ ಕಾಂಗ್ರೆಸ್ ಮುಸ್ಲಿಂ, ಮುಸ್ಲಿಂ ಕಾಂಗ್ರೆಸ್ ಎಂದು ಹೇಳಿಲ್ಲ. ಬಿಜೆಪಿ ಹಿಂದೂ, ಕಾಂಗ್ರೆಸ್ ಮುಸ್ಲಿಂ ಎಂದು ಸೃಷ್ಟಿಸಿದ್ದು ನೀವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡಿದ್ದೀರಿ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಮಗೂ ಇಲ್ಲ, ನಿಮಗೂ ಇಲ್ಲ. ಮೋದಿ ಅವರ ಹೆಂಡತಿಗೆ ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಿದ್ದೀರಿ. ಮೋದಿ ಅವರ ಹೆಂಡತಿಯನ್ನು ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಲು ನಿಮ್ಮ ಬಳಿ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.