ಮಂಗಳೂರು, ಆ 1 (Daijiworld News/MSP): ದಿನ ದಿನಕ್ಕೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡವನ್ನು ಅತಂಕಕ್ಕೆ ನೂಕುತ್ತಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 1315 ಪಾಸಿಟಿವ್ ಕೇಸ್ ದೃಢಪಟ್ಟಿದೆ. ಅಲ್ಲದೆ ವಾರದಲ್ಲಿ ಪ್ರತಿ ದಿನ ಸರಾಸರಿ 150 ಪಾಸಿಟಿವ್ ಪ್ರಕರಣ ದಾಖಲಾಗುತ್ತಿವೆ. ಅಲ್ಲದೆ ಒಂದೇ ವಾರದ ಅವಧಿಯಲ್ಲಿ 50 ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟಿದ್ದಾರೆ.

ಗಣನೀಯ ಸಂಖ್ಯೆಯಲ್ಲಿ ಸೋಂಕು ಹರಡುವುದನ್ನು ಗಮನಿಸಿ ಜಿಲ್ಲಾಡಳಿತ ಮತ್ತೆ ಲಾಕ್ ಡೌನ್ ಮೊರೆ ಹೋಗಿತ್ತು. ಜುಲೈ 16 ರಾತ್ರಿ 8ರಿಂದ ಜುಲೈ 23ರ ಬೆಳಗ್ಗೆಯವರೆಗೆ ಒಂದು ವಾರಗಳ ಲಾಕ್ ಡೌನ್ ಹೇರಿತ್ತು. ಆದರೆ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಕೊರೊನಾ ಸೋಂಕು ನಿಯಂತ್ರಣ ತರಲು ಸಾಧ್ಯವಾಗಿರಲಿಲ್ಲ.
ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಜು.23 ರಿಂದ ಜು.29 ರವರೆಗೆ 1315 ಕೊರೊನಾ ದೃಢಪಟ್ಟಿದ್ದು ಈ ಪೈಕಿ 383 ಮಂದಿಗೆ ಕೊರೊನಾ ಹೇಗೆ ತಗುಲಿದೆ ಎಂದೇ ತಿಳಿದುಬಂದಿಲ್ಲ. ಇದರ ಮೂಲ ಪತ್ತೆಗೆ ಇನ್ನು ಜಿಲ್ಲಾಡಳಿತ ಶ್ರಮಿಸುತ್ತಿದೆ.
ಸೋಂಕಿತರ ಪ್ರಮಾಣದಲ್ಲಿ ಮಾತ್ರವಲ್ಲದೆ , ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ನಿಜಕ್ಕೂ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ನೂಕುತ್ತಿದೆ.