ಮೂಡುಬಿದಿರೆ, ಏ 20: ಮುಂಬರುವ ವಿಧಾನಸಭಾ ಚುನಾವಣೆ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆಯಾಗಲಿದೆ. ಈ ನಡುವೆ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಆಭ್ಯರ್ಥಿ ಕಣಕ್ಕಿಳಿಸಿದ್ದು ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಮರನಾಥ್ ಶೆಟ್ಟಿ ಆಯ್ಕೆಯಾಗಿದ್ದರೆ. ಈ ಹಿಂದೆಯೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ಮಾಜಿ ಸಚಿವ ಅಮರನಾಥ್ ಶೆಟ್ಟಿ ಸ್ಪರ್ಧಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅಮರನಾಥ ಶೆಟ್ಟಿ ಸ್ಪರ್ಧಿಸುವುದಿಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದೀಗ ಅಮರನಾಥ್ ಶೆಟ್ಟಿ ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ.
ಈ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಅಭಯಚಂದ್ರ ಜೈನ್ ಹಾಗೂ ಬಿಜೆಪಿ ಉಮಾನಾಥ್ ಕೋಟ್ಯಾನ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಆದರೆ ಈ ಎರಡು ಪಕ್ಷಗಳಲ್ಲಿ ಕೆಲ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರಿಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ಎಸ್ ಯುಐ ಮುಖಂಡರು ಬಂಡಾಯವೆದ್ದಿದ್ದರು.