ಉಡುಪಿ, ಆ. 01 (DaijiworldNews/MB) : ಅಂಬಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಶನಿವಾರ ಸಂಭವಿಸಿದ ಕಾರು ಅಪಘಾತದಲ್ಲಿ ಎರಡು ವರ್ಷದ ಮಗು ಸಾವನ್ನಪ್ಪಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ.


ಮಂಗಳೂರಿನಿಂದ ಶಿಕಾರಿಪುರಕ್ಕೆ ದಂಪತಿ ಮತ್ತು ಅವರ ನಾಲ್ಕು ಮಕ್ಕಳು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನಿಗೆ ವಾಹನದ ನಿಯಂತ್ರಣ ತಪ್ಪಿ ರೋಡ್ ಡಿವೈಡರ್ಗೆ ಡಿಕ್ಕಿಯಾಗಿದ್ದು ಕಾರು ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ 2 ವರ್ಷದ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿದ್ದರೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದ್ದು, ಉಳಿದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಉಡುಪಿ ನಗರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.