ಸುಳ್ಯ, ಆ 1 (Daijiworld News/MSP): ರಾಜ್ಯ ಸಚಿವ ಸಂಪುಟದ ವಿಸ್ತರಣೆ ಮತ್ತು ಸುಳ್ಯ ಶಾಸಕ ಎಸ್. ಅಂಗಾರರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವಂತದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ. ಮತ್ತು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯುತ್ತಿರುವ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಎಸ್ ಅಂಗಾರರಿಗೆ ಮಂತ್ರಿ ಸ್ಥಾನ ಸಿಗುವಂತೆ ನಮ್ಮ ಪ್ರಯತ್ನವಿರುತ್ತದೆ". ಈ ಬಾರಿ ಸಂಪುಟ ಪುನಾರಚನೆ ಆಗುವ ಸಾಧ್ಯತೆಯಿಲ್ಲ. ಮೂರು ಸ್ಥಾನಗಳನ್ನು ಭರ್ತಿ ಮಾಡಲಷ್ಟೆ ಸಂಪುಟ ವಿಸ್ತರಣೆ ಸೀಮಿತವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ನಡೆಸಿ ತೀರ್ಮಾಣ ಕೈಗೊಳ್ಳುತ್ತಾರೆ ಎಂದ ಅವರು ದೇಶದಲ್ಲಿ ಕರೋನಾ ಮಹಾಮಾರಿಯಿಂದ ಆರ್ಥಿಕ ಕುಸಿತವಾಗಿದೆ. ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ನೀಡಿದ ೨೦ ಲಕ್ಷ ಕೋಟಿಗಳ ಅನುದಾನ ಮುಂದಿನ ದಿನಗಳಲ್ಲಿ ಭಾರತದ ಸ್ವಾಭಿಮಾನದ ಸಂಕೇತವಾಗಿ ಮತ್ತು ಯುವಜನತೆಯ ಉದ್ಯಮಶೀಲತೆಯ ಪ್ರೇರಣೆಗಾಗಿ ಆತ್ಮನಿರ್ಭರ ಭಾರತ ಎನ್ನುವ ಘೋಷಣೆ ಮಾಡಿದೆ. ಸ್ವದೇಶಿ ಚಿಂತನೆಯ ಆಧಾರದಲ್ಲಿ ಉದ್ದಿಮೆಗಳ ಮೂಲಕ ಸ್ವ ಉದ್ಯೋಗ ಸೃಷ್ಟಿಯ ಅಭಿನಂದನೀಯ ಕಾರ್ಯ ಶಿಬಿರದ ಮೂಲಕ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ಎಪಿಎಂಸಿ ಅಧ್ಯಕ್ ದೀಪಕ್ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್ ಜಾಕೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನ.ಪಂ. ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ವಾಣಿಶ್ರೀ ಜಟ್ಟಿಪಳ್ಳ, ಪ್ರವಿತಾ ಪ್ರಶಾಂತ್ ಕಾಯರ್ತೋಡಿ, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಶೀಲಾ ಕುರುಂಜಿ ಉಪಸ್ಥಿತರಿದ್ದರು.