ಮಂಗಳೂರು, ಏ 21: ಬಿಜೆಪಿಯ ಹೈಕಮಾಂಡ್ ಪ್ರಚಾರ ತಂತ್ರ ರೂಪಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೇ ಮಂಗಳೂರಿಗೆ ಕರೆ ತರಲು ತಯಾರಿ ನಡೆಯುತ್ತಿದೆ.
ಕಳೆದ 2013ರ ಚುನಾವಣೆ ಸಂದರ್ಭದಲ್ಲೂ ಮೋದಿ ಆಗಮಿಸಿ, ಮಂಗಳೂರಿನ ನೆಹರು ಮೈದಾನದಲ್ಲಿ ಮೇ 2ರಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. ರಾಜ್ಯದಲ್ಲಿ ಏಪ್ರಿಲ್ 29ರಿಂದ ಪ್ರಚಾರ ಕಾರ್ಯ ಕೈಗೊಳ್ಳಲಿರುವ ಮೋದಿ, 16 ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಲಿದ್ದಾರೆ. ಮೇ 8ರಂದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರ ಹಾಗೂ ರಾಯಚೂರಿನಲ್ಲಿ 29, ಮೇ 1ರಂದು ಬಳ್ಳಾರಿ ಹಾಗೂ ಬೆಳಗಾವಿ, 3ರಂದು ಚಾಮರಾಜನಗರ ಹಾಗೂ ಉಡುಪಿ, 5ರಂದು ಜಮಖಂಡಿ, 6ರಂದು ಹುಬ್ಬಳ್ಳಿ ಹಾಗೂ ಕಲಬುರ್ಗಿ, 7ರಂದು ಶಿವಮೊಗ್ಗ ತುಮಕೂರು ಮತ್ತು 8ರಂದು ಮಂಗಳೂರು, ಬೆಂಗಳೂರಿನಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
5 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಭಾಗಗಳಲ್ಲಿ ಮೋದಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಆದರೆ ಜಿಲ್ಲಾ ಬಿಜೆಪಿ ನಾಯಕರಿಗೆ ಅಧಿಕೃತವಾದ ಯಾವುದೇ ಕಾರ್ಯಕ್ರಮ, ವೇಳಾಪಟ್ಟಿ ಲಭ್ಯವಾಗಿಲ್ಲ.