ಮಂಗಳೂರು, ಆ. 02 (DaijiworldNews/MB) : ಕೊರೊನಾ ವೈರಸ್ ಸೋಂಕು ಬಂದು ಸಾವನ್ನಪ್ಪುವವರ ಕುಟುಂಬದ ಬಗ್ಗೆ ಕೊಂಚ ಮೃದುತ್ವವನ್ನು ತೋರಿಸುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ತಮ್ಮ ಸ್ವಂತ ಕುಟುಂಬ ಆಸ್ತಿಯಲ್ಲಿ ಅಂತಿಮ ಕ್ರಿಯೆ ನಡೆಸಲು ಅವಕಾಶ ನೀಡಿದೆ.

ಟುಂಬ ಸದಸ್ಯರು ಮೃತ ವ್ಯಕ್ತಿಯ ದೇಹವನ್ನು ಸ್ಪರ್ಶಿಸ ಬಾರದು ಎಂದು ತಿಳಿಸಿರುವ ಜಿಲ್ಲಾಡಳಿತ, ತಮ್ಮ ಜಮೀನಿನಲ್ಲಿ ಸಮಾಧಿ ಅಥವಾ ಶವ ಸಂಸ್ಕಾರವನ್ನು ಮಾತ್ರ ಕುಟುಂಬಸ್ಥರು ಮಾಡಬಹುದು. ಕುಟುಂಬ ಸದಸ್ಯರು ತಾವಾಗಿಯೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರಿನ ಸಹಾಯಕ ಆಯುಕ್ತ ಮದನ್ ಮೋಹನ್, "ಕೆಲವು ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಅಂತಿಮ ವಿಧಿಗಳನ್ನು ತಮ್ಮ ಸ್ವಂತ ಜಮೀನಿನಲ್ಲಿ ನಡೆಸಬೇಕು ಎಂಬ ಭಾವನಾತ್ಮಕ ಭಾವನೆ ಹೊಂದಿದ್ದಾರೆ. ಅವರಿಗೆ ಅಂತಿಮ ವಿಧಿಗಳನ್ನು ನಡೆಸಲು ನಾವು ಅವಕಾಶ ನೀಡುತ್ತೇವೆ. ಆದರೆ ಹೊರ ಜಿಲ್ಲೆಗೆ ಮೃತ ವ್ಯಕ್ತಿಯ ದೇಹವನ್ನು ಕೊಂಡೊಯ್ಯಲು ಅವಕಾಶವಿಲ್ಲ ಎಂದಿದ್ದಾರೆ.
"ಉಡುಪಿ ಜಿಲ್ಲೆಯಲ್ಲೂ, ಮೃತ ವ್ಯಕ್ತಿಯ ಅಂತಿಮ ವಿಧಿಗಳನ್ನು ಮಾಡಲು ಕುಟುಂಬಸ್ಥರು ಬಯಸಿದಲ್ಲಿ ಕುಟುಂಬದ ಸ್ವಂತ ಜಮೀನಿನಲ್ಲಿ ನಡೆಸಬಹುದು. ಆದರೆ ಇದಕ್ಕೆ ಸ್ಥಳೀಯರು ವಿರೋಧಿಸುವಂತಿಲ್ಲ. ಕೊರೊನಾ ನಿಯಮದ ಪ್ರಕಾರವಾಗಿ ಅಂತಿಮ ವಿಧಿ ನಡೆಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಕರ್ನಾಟಕದ ಹೈಕೋರ್ಟ್ ಕೂಡ ಈ ನಿಟ್ಟಿನಲ್ಲಿ ಪೂರಕ ಹೇಳಿಕೆ ನೀಡಿದೆ. ಈ ಮೊದಲು ಕೆಲವು ಕೊರೊನಾ ಸಾವು ಪ್ರಕರಣಗಳು ಸಂಭವಿಸಿದಾಗ ಸರ್ಕಾರವೇ ಅಂತ್ಯಕ್ರಿಯೆಯನ್ನು ನಡೆಸುತ್ತಿತ್ತು. ಪ್ರಕರಣಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮೃತ ದೇಹದ ಅಂತಿಮ ವಿಧಿಗಳನ್ನು ನಡೆಸುವುದು ಸರ್ಕಾರಿ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.