ಕಾಸರಗೋಡು, ಏ 21: ಮರಳು ಲಾರಿ ಮತ್ತು ಸ್ಕೂಟರ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮುಳ್ಳೇರಿಯ ಬಳಿ ನಡೆದಿದೆ.
ಮುಳ್ಳೇರಿಯ ಅಡ್ಕದ ಬಿಂದು (44) ಮೃತಪಟ್ಟ ಮಹಿಳೆ. ಇವರು ಮುಳ್ಳೇರಿಯ ಪೇಟೆಯಲ್ಲಿ ಟೈಲರಿಂಗ್ ಶಾಪ್ ನಡೆಸುತ್ತಿದ್ದರು. ಬೆಳಿಗ್ಗೆ ಟೈಲರಿಂಗ್ ಶಾಪ್ ಗೆ ತನ್ನ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಮರಳು ಹೇರಿಕೊಂಡು ಅತೀ ವೇಗದಿಂದ ಬರುತ್ತಿದ್ದ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ರಸ್ತೆಗೆಸೆಲ್ಪಟ್ಟ ಬಿಂದು ಅವರ ತಲೆಯ ಮೇಲೆ ಲಾರಿಯ ಚಕ್ರ ಹರಿದಿದ್ದು ಸ್ಥಳದಲ್ಲೇ ಮೃತಪಟ್ಟರು.
ಆದೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.