ವಿಟ್ಲ, ಆ. 02 (DaijiworldNews/SM): ವಿವಾಹಿತ ಮಹಿಳೆಯ ಮನೆಗೆ ನುಗ್ಗಿ ಯುವಕನೊಬ್ಬ ಮಾನಭಂಗಕ್ಕೆ ಯತ್ನಿಸಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ಗ್ರಾಮದಲ್ಲಿ ನಡೆದಿದೆ.

ಮದಕ ನಿವಾಸಿ ಸಾಧಿಕ್ ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿ ರಾತ್ರಿ ಸಮಯದಲ್ಲಿ ಮಹಿಳೆಯ ಮನೆಗೆ ಬಂದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂಡು ತಿಳಿದುಬಂದಿದೆ. ಆರೋಪಿ ಸಾಧಿಕ್ ಮಹಿಳೆಯ ಮೊಬೈಲ್ ಗೆ ಮೆಸೇಜ್ ಹಾಗೂ ಕರೆ ಮಾಡಿ ತೊಂದರೆ ನೀಡುತ್ತಿದ್ದ ಎನ್ನಲಾಗಿದೆ.
ಅವರ ಮಕ್ಕಳು ಮನೆಯಲ್ಲಿ ಮಲಗಿದ್ದ ಸಮಯ ರಾತ್ರಿ 11.30ರ ವೇಳೆಗೆ ಆರೋಪಿ ಮಹಿಳೆಯ ಮನೆಗೆ ತೆರಳಿ ಬಾಗಿಲು ತಟ್ಟಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಬಾಗಿಲನ್ನು ತೆರೆದು ಆರೋಪಿಯನ್ನು ಕಂಡು ಬಾಗಿಲು ಮುಚ್ಚಲು ಪ್ರಯತ್ನಿಸಿದಾಗ ಆರೋಪಿಯು ಬಾಗಿಲನ್ನು ದೂಡಿ ಒಳಬಂದು ಕೈಯಿಂದ ಮಹಿಳೆಯನ್ನು ದೂಡಿಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಈ ವಿಚಾರ ಇತರರಿಗೆ ತಿಳಿಸಿದ್ದಲ್ಲಿ ಜೀವ ತೆಗೆಯುವ ಬೆದರಿಕೆ ಒಡ್ಡಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣಾ ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.