ಕಾಸರಗೋಡು, ಆ 3 (Daijiworld News/MSP): ಕೊರೊನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು ಕೇರಳ - ಕರ್ನಾಟಕ ನಡುವಿನ ಸಂಪರ್ಕ ಬಂದ್ ಮಾಡಿರುವುದರಿಂದ ಕಾಸರಗೋಡು ಜಿಲ್ಲೆಯ ನೂರಾರು ಉದ್ಯೋಗಿಗಳು , ರೋಗಿಗಳು ಹಾಗೂ ಇತರ ಪ್ರಯಾಣಿಕರು ಅತಂತ್ರದಲ್ಲಿ ಸಿಲುಕಿದ್ದು, ಈ ನಡುವೆ ಗಡಿ ನಿರ್ಬಂಧವನ್ನು ಹಿಂದೆಗೆದುಕೊಳ್ಳುವಂತೆ ಒತ್ತಡ ತೀವ್ರಗೊಳ್ಳುತ್ತಿದೆ.

ಮಾರ್ಚ್ 24ರಿಂದ ಕರ್ನಾಟಕ ಸಂಪರ್ಕದ ರಸ್ತೆಗಳನ್ನು ಬಂದ್ ಮಾಡಿದ್ದರೂ ಜೂನ್'ನಲ್ಲಿ ಮಂಗಳೂರು ಹಾಗೂ ಕರ್ನಾಟಕದ ಹಲವೆಡೆಗೆ ತೆರಳುವವರಿಗೆ ನಿಬಂಧನೆಗಳೊಂದಿಗೆ ದೈನಂದಿನ ಪಾಸ್ ಜಾರಿ ತಂದಿತ್ತು.
ಇದರಿಂದ ಕಾಸರಗೋಡಿನಿಂದ ಮಂಗಳೂರಿಗೆ ತೆರಳುವ ಉದ್ಯೋಗಿಗಳು ಹಾಗೂ ಇತತರಿಗೆ ಅನುಕೂಲವಾಗಿತ್ತು. ಆದರೆ ಮೂರನೇ ಹಂತದಲ್ಲಿ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದುದರಿಂದ ಕೇರಳವು ಕರ್ನಾಟಕಕ್ಕೆ ತೆರಳಲು ನಿರ್ಬಂಧ ಹಾಕಿತ್ತು. ಇದರಿಂದ ಉದ್ಯೋಗ ಹಾಗೂ ಇನ್ನಿತರ ಅಗತ್ಯಗಳಿಗಾಗಿ ತೆರಳುವವರು ಮತ್ತೆ ಅತಂತ್ರಕ್ಕೆ ಸಿಲುಕುವಂತಾಯಿತು
ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಉಭಯ ರಾಜ್ಯಗಳ ನಡುವೆ ನಿರ್ಬಂಧ ತೆರವುಗೊಳಿಸಲು ಅಭ್ಯಂತರ ಇಲ್ಲ ಎಂದು ತಿಳಿಸಿದ್ದು, ಕಾಸರಗೋಡು ಜಿಲ್ಲಾಡಳಿತ ಈ ಬಗ್ಗೆ ಮೌನವಹಿಸಿದೆ.
ಗಡಿ ನಿರ್ಬಂಧವನ್ನು ತೆರವುಗೊಳಿಸುವಂತೆ ಕೆಲ ಸಂಘಟನೆಗಳು ಹಾಗೂ ಬಿಜೆಪಿ ಹೋರಾಟದ ಸುಳಿವು ನೀಡಿದೆ. ಈ ನಡುವೆ ಕಾಸರಗೋಡು ಜಿಲ್ಲಾಧಿಕಾರಿ ಗಡಿ ನಿರ್ಬಂಧ ತೆರವುಗೊಳಿಸಬೇಕೇ ಎಂಬ ಬಗ್ಗೆ ಜನಪ್ರತಿನಿಧಿಗಳ ಜೊತೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಕೇಂದ್ರ ಹೊರಡಿಸಿರುವ ಮಾರ್ಗಸೂಚಿಯಂತೆ ಅಂತರಾಜ್ಯಗಡಿ ನಿರ್ಬಂಧ ತೆರವುಗೊಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಪರವಾದ ನಿಲುವು ತೆಗೆದುಕೊಳ್ಳಬೇಕೆಂಬ ಒತ್ತಡ ತೀವ್ರಗೊಳ್ಳುತ್ತಿದೆ.