ಕುಂದಾಪುರ, ಆ 3 (Daijiworld News/MSP): ಕೋಡಿ-ಗಂಗೊಳ್ಳಿ ಬ್ರೇಕ್ವಾಟರ್ ರಚನೆಯಿಂದ ನಿರ್ಮಾಣಗೊಂಡಿರು ಕೋಡಿ ಸೀವಾಕ್ ಪ್ರದೇಶಕ್ಕೆ ಹೊಸ ಅತಿಥಿಗಳು ಕಾಣಿಸಿಕೊಂಡಿದ್ದಾರೆ. ಸೀವಾಕ್ನ ವಿಹಾರಾರ್ಥಿಗಳಿಗೆ ಈ ಅತಿಥಿಗಳು ಬೇಜಾನ್ ಖುಷಿ ಕೊಡುತ್ತಿದ್ದಾರೆ. ಆ ಅತಿಥಿಗಳು ಯಾರು ಅಂತಿರಾ? ಅವರೇ ಆಳಸಮುದ್ರದಲ್ಲಿ ಕಾಣಸಿಗುವ ಡಾಲ್ಫಿನ್ ಮೀನುಗಳು.


ಕಳೆದ ಕೆಲವು ದಿನಗಳಿಂದ ಕೋಡಿ-ಗಂಗೊಳ್ಳಿ ಕಡಲ ಕಿನಾರೆಯ ಸಮೀಪಕ್ಕೆ ಅಪರೂಪದ ಡಾಲ್ಫಿನ್ ಮೀನುಗಳು ದರ್ಶನ ಕೊಟ್ಟಿವೆ. ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದವರಿಗೆ ಈ ಡಾಲ್ಪಿನ್ ಮೀನುಗಳ ನೆಗೆತ ಕಂಡು ಬಂದಿದೆ. ಸುಮಾರು 5-6 ಡಾಲ್ಫಿನ್ ಮೀನುಗಳು ಇಲ್ಲಿ ಇವೆ ಎನ್ನಲಾಗುತ್ತಿದೆ. ಈ ಡಾಲ್ಫಿನ್ ಮೀನುಗಳ ನೆಗೆತ, ಚೆಲ್ಲಾಟ, ಮಿಸುಕಾಟವನ್ನು ನೋಡುವುದು ಒಂಥರಾ ಕಣ್ಣುಗಳಿಗೆ ಹಬ್ಬ. ಅಂತಹ ಮೋಹಕ ಅನುಭವನ್ನು ಪಡೆಯಲು ಅದೆಷ್ಟೋ ಜನ ಕಾದು ಕುಳಿತಿರುತ್ತಾರೆ. ಸೀವಾಕ್ ಬಂಡೆಯ ಮೇಲೆ ಕುಳಿತು ಡಾಲ್ಫಿನ್ ನೆಗೆತ, ಅವುಗಳ ದರ್ಶನ ಭಾಗ್ಯಕ್ಕಾಗಿ ಕಾಯುವ ಕುತೂಹಲಿಗಳು ಇದ್ದಾರೆ. ಇನ್ನೂ ಕೆಲವರು ದೋಣಿಗಳ ಮೂಲಕ ಒಂದಿಷ್ಟು ದೂರದ ತನಕ ಹೋಗಿ ಡಾಲ್ಪಿನ್ ನೋಡುತ್ತಾರೆ. ಇಲ್ಲಿನ ಮೀನುಗಾರರಿಗೆ ಡಾಲ್ಫಿನ್ ದರ್ಶನ ಸಹಜವಾದರೂ ಕೂಡಾ ಪ್ರವಾಸಿಗರು, ಸ್ಥಳೀಯ ಆಸಕ್ತರು ಡಾಲ್ಫಿನ್ ನೆಗೆತಕ್ಕಾಗಿ ಕಾದು ಕುಳಿತಿರುವುದು ಕಾಣಬಹುದಾಗಿದೆ.
ಡಾಲ್ಫಿನ್ಗಳು ಇರುವುದು ಸಹಜವಾಗಿ ಆಳ ಸಮುದ್ರದಲ್ಲಿ. ಅಂದರೆ ಗಂಗೊಳ್ಳಿಯಿಂದ ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ. ಅಲ್ಲಿಂದ ಅವು ಇಲ್ಲಿಗೆ ಆಹಾರ ಹುಡುಕಿಕೊಂಡು ಬಂದಿರಬಹುದು. ಈ ಭಾಗದಲ್ಲಿ ಅವುಗಳಿಗೆ ಅಪೇಕ್ಷಿತ ಆಹಾರ ಸಿಕ್ಕಿರಬಹುದು. ಹಾಗಾಗಿ ಅವು ಇಲ್ಲಿ ನೆಲೆಗೊಂಡಿರಬಹುದು ಎನ್ನಲಾಗುತ್ತಿದೆ.
ಈಗ ಕಡಲು ಒಂದಿಷ್ಟು ನೀರಾಳವಾಗಿದೆ. ಕೊರೊನಾ ಕರಿಛಾಯೆಯಿಂದ ಯಾಂತ್ರೀಕೃತ ಬೋಟುಗಳ ಅಟ್ಟಹಾಸವಿಲ್ಲ. ಸಮುದ್ರ ಜೀವಿಗಳು ಸ್ವಚ್ಛಂದವಾಗಿ ವಿಹಾರಿಸುತ್ತಿವೆ. ಕಡಲು ಕೂಡ ಈ ಮುಂಗಾರು ಋತುವಿನಲ್ಲಿ ಶಾಂತವಾಗಿರುವುದರಿಂದ ಮತ್ಸ್ಯ ಸಂಕುಲಕ್ಕೂ ಪೂರಕವಾಗಿದೆ. ಹಾಗಾಗಿ ಡಾಲ್ಫಿನ್ ಸೇರಿದಂತೆ ಆಳ ಸಮುದ್ರದಲ್ಲಿ ಇರುವ ಮತ್ಸ್ಯ ಸಂಕುಲ ತೀರಕ್ಕೂ ಬರುತ್ತಿವೆ. ಕೋಡಿಯ ಸೀವಾಕ್ನಲ್ಲಿ ವಿಹಾರ ಮಾಡುವವರಿಗೆ ಅಪರೂಪಕ್ಕೆ ದರ್ಶನ ಕೊಟ್ಟು ಮಾಯಾವಾಗುತ್ತಿವೆ. ಇತ್ತೀಚೆಗೆ ಮಾವಿನಕಟ್ಟೆಯ ಜಾವೇದ್ ಎನ್ನುವವರಿಗೆ ಕಾಣ ಸಿಕ್ಕ ಡಾಲ್ಫಿನ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಕಷ್ಟು ವೈರಲ್ ಕೂಡಾ ಆಗಿದೆ. ಇದರಿಂದಾಗಿ ಡಾಲ್ಫಿನ್ ನೋಡಲು ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ.