ಉಡುಪಿ, ಆ 3 (Daijiworld News/MSP): "ಸದಾ ಸುಳ್ಳನ್ನೇ ಸತ್ಯದಂತೆ ಬಿಂಬಿಸುವ ಬಿಜೆಪಿಗೆ, ಮಾತು ಮಾತಿಗೆ ಜೈ ಶ್ರೀರಾಮ್ ಎಂದು ಹೇಳಲು ಯಾವ ನೈತಿಕತೆ ಇದೆ, ಬಿಜೆಪಿಗೆ ರಾಮಮಂದಿರ ನಿರ್ಮಾಣದ ವಿಷಯ ಹೊರತುಪಡಿಸಿ ಬೇರೆ ಯಾವುದೇ ಅಜಂಡಾ ಇಲ್ಲ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಂದು ವಾಗ್ದಾಳಿ ನಡೆಸಿದರು.


ಸೋಮವಾರ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, " ಬಿಜೆಪಿಗೆ ರಾಮಮಂದಿರ ನಿರ್ಮಾಣದ ವಿಷಯ ಹೊರತುಪಡಿಸಿ ಬೇರೆ ಯಾವುದೇ ಅಜಂಡಾ ಇಲ್ಲ. ರಾಮ ಮಂದಿರ ನಿರ್ಮಾಣವಾಗುವುದು ಒಳ್ಳೆಯದೆ ಆದರೆ ದೇವರ ಕೆಲಸ , ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಬೇಕು. ಕೆಲವು ರಾಜಕೀಯ ನಾಯಕರು ಧಾರ್ಮಿಕ ಕೆಲಸಕ್ಕೆ ರಾಜಕೀಯದ ಬಣ್ಣ ಹಚ್ಚಿ ಅವೈಜ್ಞಾನಿಕ ಹೇಳಿಕೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ಸದಾ ಸುಳ್ಳನ್ನೇ ಸತ್ಯದಂತೆ ಬಿಂಬಿಸುವ ಬಿಜೆಪಿಗೆ,ಮಾತು ಮಾತಿಗೆ ಜೈ ಶ್ರೀರಾಮ್ ಹೇಳಲು ಬಿಜೆಪಿ ಯಾವ ನೈತಿಕತೆ ಇದೆ? ದೇವರ ಹೆಸರಿನಲ್ಲಿ ಮೋದಿಯಿಂದ ಹಿಡಿದು ರಾಜ್ಯದ ಎಲ್ಲಾ ಬಿಜೆಪಿಗರು ಸುಳ್ಳನ್ನೇ ಹೇಳುತ್ತಾರೆ" ಎಂದು ಅವರು ಆರೋಪಿಸಿದರು.
'ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಾಂಗ್ರೆಸ್ ಬಯಲಿಗೆಳೆಯದೆ ಬಿಡುವುದಿಲ್ಲ. ಬಿಜೆಪಿಯ ದುರಾಡಳಿತದ ವಿರುದ್ಧ ಕಾಂಗ್ರೆಸ್ ನ ಹೋರಾಟ ಇಲ್ಲಿಗೆ ಮುಗಿದಿಲ್ಲ. ಬಿಜೆಪಿಗೆ ತಾಕತ್ತಿದ್ದರೆ ನಮ್ಮ ಮೇಲೆ ಡಿಫಮೇಶನ್ ಪ್ರಕರಣ ದಾಖಲಿಸಬಹುದಿತ್ತು. ಅದನ್ನು ಬಿಟ್ಟು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಸರಕಾರದ ಖರೀದಿಯಲ್ಲಿ ಪಾರದರ್ಶಕವಿದ್ದರೆ, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.
"ಬಿಜೆಪಿ ನೇತೃತ್ವದ ರಾಜ್ಯ ಸರಕಾರ, ಕೇಂದ್ರ ಸರಕಾರ ಬಿಡುಗಡೆ ಮಾಡಿದ ಶೇ50% ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಇದ್ದು ಸದ್ಯದಲ್ಲೇ ಎಲ್ಲವೂ ಬಹಿರಂಗಗೊಳ್ಳಲಿದೆ. ಸರಕಾರ ಬಿಡುಗಡೆ ಮಾಡಿದ 5 ಕೋಟಿ ರೂ.ಗಳಲ್ಲಿ ಸದ್ಯ 1.45 ರಷ್ಟು ಹಣವನ್ನ ಮಧ್ಯವರ್ತಿಗಳು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಬೇರೆ ರಾಜ್ಯ ಕ್ಕೆ ಹೋಲಿಕೆ ಮಾಡಿದರೆ, ವೈದ್ಯಕೀಯ ಉಪಕರಣಗಳ ಬೆಲೆ ದುಪ್ಪಟ್ಟಾಗಿದ್ದು, ಕಳಪೆ ಮಟ್ಟದ ಉಪಕರಣಗಳನ್ನು ನೀಡಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಘೋಷಣೆ ಮಾಡಿದ ಪ್ಯಾಕೇಜ್ ಇನ್ನು ಎಲ್ಲರಿಗೆ ತಲುಪಿಲ್ಲ. ಕೊರೊನಾ ನೆಪದಲ್ಲಿ ಸರಕಾರದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಕೊರೊನಾದ ಗಂಭೀರತೆಯ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದು ಮೊದಲು ಕಾಂಗ್ರೆಸ್. ಎಚ್ಚರಿಕೆ ಕೊಟ್ಟ ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕರು ಹೀಯಾಳಿಸಿದರು. ಸರಕಾರವನ್ನು ತೆಗಳುವುದು, ನಿಷ್ಕ್ರೀಯಗೊಳಿಸುವುದು ನಮ್ಮ ಉದ್ದೇಶ ಅಲ್ಲ. ನಾವು ಸಂಕಷ್ಟದಲ್ಲಿರುವ ಜನತೆಗೆ ಅನ್ನ ಆಹಾರ, ಕೊಟ್ಟು ಹೆಲ್ತ್ ವಾರಿಯರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಅದಕ್ಕಾಗಿ ರಾಜ್ಯದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ. "ಆರೋಗ್ಯ ಹಸ್ತ " ಎನ್ನುವ ಕಾರ್ಯಕ್ರಮದ ಮೂಲಕ ಇನ್ನಷ್ಟು ಆರೋಗ್ಯಕ್ಕೆ ಒತ್ತು ನೀಡುವ ಕೆಲಸ ಮಾಡಲಿದ್ದೇವೆ " ಎಂದರು.
ಯಡಿಯೂರಪ್ಪನವರ ನೇತೃತ್ವದ ಸರಕಾರ ರಚನೆಗೆ ಅದೆಷ್ಟು ಖರ್ಚಾಗಿದೆ, ಕೊರೊನಾ ಮುಖಾಂತರ ಎಲ್ಲವೂ ಮತ್ತೆ ಪುನರ್ ಸಂಗ್ರಹವಾಗುತ್ತಿದೆ. ರಾಜ್ಯದಲ್ಲಿ ಹುದ್ದೆಯಲ್ಲೂ, ಖರೀದಿಯಲ್ಲೂ ಎಲ್ಲವನ್ನೂ ಹರಾಜಿಗೆ ಇಟ್ಟಿದ್ದಾರೆ. ಭೂ ಸುಧಾರಣ ಕಾಯ್ದೆ ನಿಷ್ಕ್ರೀಯವಾಗಿದೆ. ಸರಕಾರ ಆಡಳಿತ ಚಟುವಟಿಕೆಗಳು, ನೀತಿಗಳೆಲ್ಲವೂ ಪ್ರಜಾ ಪ್ರಭುತ್ವದ ವಿರುದ್ದವಾಗಿದೆ. ಬಿಜೆಪಿಯ ಹಗಲು ದರೋಡೆಯನ್ನು ಸಹಿಸಲ್ಲ, ಇದರ ಗಂಭೀರತೆಯನ್ನು ಜನತೆಗೆ ಅರ್ಥೈಸುತ್ತೇವೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮರ್ ಜೆಡಿಎಸ್ ನತ್ತ ಒಲುವು ತೋರುವುದರ ಪ್ರಶ್ನೆಗೆ ಉತ್ತರಿಸಿದ ಗುಂಡುರಾವ್ "ಅವರು ಯಾವುದೇ ಜಾತಿ ಸಂಘಟನೆಯಿಂದ ಮೇಲೆ ಬಂದಿಲ್ಲ ಕಾಂಗ್ರೆಸ್ ಜಾತ್ಯತೀತ ಪಕ್ಷ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಗೆ ಹತ್ತಿರವಾಗುವ ಅಥವಾ ಮೈತ್ರಿ ಮಾಡುವ ಸ್ಥಿತಿ ಈಗಿಲ್ಲ, ಅಗತ್ಯವೂ ಇಲ್ಲ. ಮುಂದಿನ ಬೆಳವಣಿಗೆ ಬಗ್ಗೆ ಗೊತ್ತಿಲ್ಲ, ಹೈ ಕಮಾಂಡ್ ನಿರ್ಧಾರಿಸುತ್ತಾರೆ ಎಂದು ಜಾರಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವೆ ಜಯಮಾಲ, "ಸಿಎಂ ಯಡಿಯೂರಪ್ಪ ಮೊದಲ ಮೂರು ತಿಂಗಳು ಏಕಾಂಗಿಯಾಗಿ ಕೆಲಸ ಮಾಡಿದರು. ಸರಕಾರ ಖರೀದಿ ಮಾಡಿದ ವೈದ್ಯಕೀಯ ಉಪಕರಣಗಳ ಬಗ್ಗೆ ಅನುದಾನ ಬಳಕೆ ಮಾಡಿದ ಬಗ್ಗೆ ಸರಕಾರಕ್ಕೆ ಸರಿಯಾದ ಲೆಕ್ಕಾಚಾರ ಇಲ್ಲ. ಆಡಳಿತ ಬಾರದ ಪಕ್ಷ ಆಡಳಿತವನ್ನು ಮಾಡಬಾರದು. ಇಂದಿಗೂ ಬಿಜೆಪಿಗೆ ಕರ್ನಾಟಕದ ಜನತೆ ಆಶೀರ್ವಾದ ಮಾಡಿಲ್ಲ" ಎಂದು ಟೀಕಿಸಿದರು .
ಈ ಸಂದರ್ಭ ವಿನಯ್ ಕುಮಾರ್ ಸೊರಕೆ, ಮಾಜಿ ಉಸ್ತುವಾರಿ ಸಚಿವರು, ಜಿ ಎ ಬಾವಾ, ಕೆಪಿಸಿಸಿ, ಪ್ರದಾನ ಕಾರ್ಯದರ್ಶಿ, ಅಶೋಕ್ ಕೊಡವೂರು, ಅಧ್ಯಕ್ಷ ರು,ಜಿಲ್ಲಾ ಕಾಂಗ್ರೆಸ್, ನವೀನ್ ಚಂದ್ರ ಜೈನ್, ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಕಾಪು, ಗೀತಾ ವಾಗ್ಳೆ , ಅಧ್ಯಕ್ಷ ರು , ಜಿಲ್ಲಾ ಮಹಿಳಾ ಕಾಂಗ್ರೆಸ್, ಎಂ ಎ ಗಫೂರ್, ಕೆಪಿಸಿಸಿ, ಪ್ರದಾನ ಕಾರ್ಯದರ್ಶಿ ಮುಂತಾದವರು ಉಪಸ್ಥಿತರಿದ್ದರು.