ಬೈಂದೂರು ಏ 22: ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳಲ್ಲಿ ಭಿಕ್ಷುಕನಂತೆ ಕಾಡಿಬೇಡಿ 2 ಸಾವಿರ ಕೋಟಿಗೂ ಮಿಕ್ಕಿ ಅನುದಾನ ತಂದ ಶಾಸಕರಿದ್ದರೆ ಅದು ಗೋಪಾಲ ಪೂಜಾರಿಯವರು. ಅವರ ಅಭಿವೃದ್ದಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಲಿದೆ. ಈ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಇಡೀ ರಾಜ್ಯಕ್ಕೇ ದೊಡ್ಡ ಅಂತರದ ಪ್ರಚಂಡ ಗೆಲುವನ್ನು ಸಾಧಿಸುವ ಮೂಲಕ ಮಂತ್ರಿಯಾಗಿ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು. ಬೈಂದೂರು ಜೆ.ಎನ್.ಆರ್ ಸಭಾಂಗಣದಲ್ಲಿ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತು ಸರ್ಕಾರಗಳ ಅವಶ್ಯಕತೆ ಇರುವುದು. ಬಡವರು ದುರ್ಬಲರಿಗೆ. ಬಡವರ ಪರ ಸರ್ಕಾರ ನೀಡುವುದು ಕಾಂಗ್ರೆಸ್ ಮಾತ್ರ. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬಡವರ ಮನಸ್ಸನ್ನು ಗೆದ್ದಿದೆ. ಮುಂದೆ ಕೂಡಾ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಬೇಕು. ಮಾಧ್ಯಮ ಸಮೀಕ್ಷೆಯಲ್ಲಿ ಗೋಪಾಲ ಪೂಜಾರಿ ಅವರು ರಾಜ್ಯಕ್ಕೇ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಂದರೆ ಅವರು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದ ಅವರು, ಚುನಾವಣೆ ಎಂದರೆ ಯುದ್ದ ಇದ್ದಂತೆ. ಕಾರ್ಯಕರ್ತರು ಸೇನಾನಿಗಳು. ಚುನಾವಣೆ ಗೆಲ್ಲಲು ಎರಡು ಸೇತುವೆ ದಾಟಬೇಕು. ಒಂದು ಕಾರ್ಯಕರ್ತರು ಮನಸ್ಸು ಮಾಡಿದಾಗ ಮತದಾರರ ಸೇತುವೆ ದಾಟಲು ಸಾಧ್ಯ ಎಂದು ಅವರು ಹೇಳಿದರು.
ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ದೇಶಕ್ಕೆ ಉನ್ನತ ಸಂವಿಧಾನ ರಚಿಸಿಕೊಟ್ಟಿತು. 60 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಮಾಡಿದ ಕೊಡುಗೆ ಒಂದೆರಡಲ್ಲ. ಆದರೆ ಕಳೆದ ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರ ದೇಶಕ್ಕೆ ಏನು ಮಾಡಿದೆ? ಚುನಾವಣಾ ಸಂದರ್ಭದಲ್ಲಿ ಜನರಿಗೆ ಸುಳ್ಳು ಸುಳ್ಳು ಆಶ್ವಾಸನೆ ಕೊಟ್ಟಿತ್ತು. ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕುವುದಾಗಿ ಹೇಳಿದರು. ಕಪ್ಪು ಹಣ ಇಟ್ಟವರ ಮೇಲೆ ಕೇಸು ಹಾಕುತ್ತೇವೆ ಎಂದರು. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯಿತು. ಸ್ವಿಸ್ ಬ್ಯಾಂಕ್ ಹಣ ತರಲು ಸಾಧ್ಯವಾಯಿತಾ? ಮೋದಿಯವರೇ ಈ ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇಲ್ಲಿ ಲಲಿತ್ ಮೋದಿ, ನೀರವ್ ಮೋದಿ ಯಾರು? ಉತ್ತರ ಕೊಡಿ. ಜನರಿಗೆ ಆಶ್ವಾಸನೆ ಕೊಟ್ಟು ಅದನ್ನು ಈಡೇರಿಸುವುದು ಮುಖ್ಯ ಎಂದು ಅವರು ಹೇಳಿದರು.
ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಅಲ್ಪಸಂಕ್ಯಾತ ನಿಗಮದ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾ ಚುನಾವಣಾ ಉಸ್ತುವಾರಿ ಜಿ,ಎ ಬಾವ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜುದೇವಾಡಿಗ, ಉಸ್ತುವಾರಿ ಬಿ.ಹಿರಿಯಣ್ಣ, ರಾಜ್ಯ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಮಾಣಿಗೋಪಾಲ, ಮೆಸ್ಕಾಂ ನಿರ್ದೇಶಕ ರಿಯಾಜ್ ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಕೋಶಾಧಿಕಾರಿ ವಾಸುದೇವ ಯಡಿಯಾಳ, ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ, ದೇವಾನಂದ ಶೆಟ್ಟಿ, ಮಹಿಳಾ ಕಾಂಗ್ರೆಸ್ ವಂಡ್ಸೆ ಬ್ಲಾಕ್ ಅಧ್ಯಕ್ಷೆ ಲಲಿತಾ ಶ್ರೀನಿವಾಸ ಗಾಣಿಗ, ಜಿ.ಪಂ.ಸದಸ್ಯರಾದ ಗೌರಿ ದೇವಾಡಿಗ, ಜ್ಯೋತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ ವಂದಿಸಿದರು.
ಇದು ಧರ್ಮ ಯುದ್ಧ, ಇದರಲ್ಲಿ ಧರ್ಮವೇ ಗೆಲ್ಲುತ್ತದೆ-ಗೋಪಾಲ ಪೂಜಾರಿ
ಈ ಬಾರಿ ನಿಜವಾದ ಹೋರಾಟ ನಡೆಯುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಇದು ಧರ್ಮ ಯುದ್ಧ. ಈ ಧರ್ಮ ಯುದ್ಧದಲ್ಲಿ ಧರ್ಮವೇ ಗೆಲ್ಲುತ್ತದೆ ಎಂದು ಶಾಸಕ, ಚುನಾವಣಾ ಅಭ್ಯರ್ಥಿ ಗೋಪಾಲ ಪೂಜಾರಿ ಹೇಳಿದ್ದಾರೆ. ರಾಜ್ಯದಲ್ಲಿಯೇ ಹಿಂದುಳಿದ ಕ್ಷೇತ್ರವಾಗಿದ್ದ ಬೈಂದೂರು ಕ್ಷೇತ್ರ ಇವತ್ತು ಅಭಿವೃದ್ದಿಯಾಗಿದೆ. ಈ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ಬಂದಿದೆ. ಸೇತುವೆ, ಕಿಂಡಿಅಣೆಕಟ್ಟು, ರಸ್ತೆ, ಕುಡಿಯುವ ನೀರು, ಮೀನುಗಾರಿಕಾ ಬಂದರು ಹೀಗೆ ಅಭಿವೃದ್ದಿ ಕಾಮಗಾರಿಗಳು ನಡೆದರೆ ಬಿಜೆಪಿ ಅಭಿವೃದ್ದಿ ಆಗಿಲ್ಲ ಎನ್ನುತ್ತಿದ್ದಾರೆ. ಅವರ ಆರೋಪಗಳಿಗೆ ಹುರುಳಿಲ್ಲ. ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಾಡುವುದು ಅಂದರೆ ಗೇರುಬೀಜ ಕಾರ್ಖಾನೆ ಮಾಡಿದ ಹಾಗೇನಾ? ಬಿಜೆಪಿಯ ಸಂಸದರಿದ್ದಾರೆ. ಬೈಂದೂರಿಗೆ ಮೇಲ್ಸೆತುವೆ ಮಾಡಲು ಆಗಲಿಲ್ಲ. ಆಸ್ಕರ್ ಫೆರ್ನಾಂಡಿಸ್ ಪ್ರಯತ್ನದಿಂದ ಕುಂದಾಪುರಕ್ಕೆ ಮೇಲ್ಸೆತುವೆ ಆಗುತ್ತಿದೆ. ಮತ್ತೆ ಬಿಜೆಪಿಗರು ಮಾತನಾಡುತ್ತಾರೆ. ಸಾಧ್ಯವಾದರೆ ಬೈಂದೂರಿಗೆ ಮೇಲ್ಸೆತುವೆ ಮಾಡಿ ನಂತರ ಮಾತನಾಡಿ ಎಂದು ಬಿಜೆಪಿಗರಿಗೆ ಸವಾಲು ಹಾಕಿದರು.
ಆದರ್ಶ ಗ್ರಾಮ ಕೆರಾಡಿ ಮತ್ತು ಶಿರೂರುಗೆ ತುಲನೆ ಮಾಡಿ. ಶಿರೂರಿನಲ್ಲಿ 31 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದ್ರ ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಕಾರ್ಯಆಗುತ್ತಿದೆ. ಇದೆಲ್ಲಾ ಅಭಿವೃದ್ದಿ ಕೆಲಸ ಆಲ್ಲವೇ? ಕುಡಿಯುವ ನೀರಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ನಾಡದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆಗುತ್ತಿದೆ. ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲ ವೃದ್ದಿ ಮಾಡುವ ಕೆಲಸ ಆಗುತ್ತಿದೆ. ಇದೆಲ್ಲ ನಿಮಗೆ ತೋರುವುದಿಲ್ಲವೇ? ಇಂಜಿನಿಯರ್ ಕಾಲೇಜು, ಪ್ರವಾಸೋಧ್ಯಮ ಅಂತಿರಲ್ಲ. ನಿಮ್ಮ ಶಾಸಕರು ಈ ಹಿಂದೆ ಶಾಸಕರಾಗಿದ್ದರಲ್ಲ. ಆಗ ಮಾಡಲಿಲ್ಲ ಏಕೆ ? ಎಂದು ಪ್ರಶ್ನಿಸಿದ ಅವರು ಇವತ್ತು ಫೇಕ್ ಅಕೌಂಟ್ ಮಾಡಿ ಧಮ್ಕಿ ಹಾಕುತ್ತಿರಾ? ನೇರ ಬನ್ನಿ, ರಂಗಸ್ಥಳಕ್ಕೆ ನಾವು ರೆಡಿ ಇದ್ದೇವೆ ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದರು.