ಕಾಸರಗೋಡು, ಏ 22: ಜಮ್ಮು ಕಾಶ್ಮೀರದ ಕತ್ವಾದಲ್ಲಿ ಎಂಟು ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ 16 ರಂದು ಕೇರಳ ರಾಜ್ಯದಾದ್ಯಂತ ಕರೆ ನೀಡಲಾದ ಹರತಾಳದ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ರವಾನಿಸಿದ್ದ ಸೂತ್ರಧಾರ ಸೇರಿದಂತೆ ನಾಲ್ವರನ್ನು ಮಲಪ್ಪುರಂ ನಲ್ಲಿ ಬಂಧಿಸಲಾಗಿದೆ.
ಬಂಧಿತರು ಸಂಘ ಪರಿವಾರ ದೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಕೊಲ್ಲಂ ನ ಅಮರ್ ನಾಥ್ ಬೈಜು (20) , ಸುಧೀಶ್ (22) , ಗೋಕುಲ್ ಶೇಖರ್ ( 21), ಅಖಿಲ್ ( 23) ಎಂದು ಗುರುತಿಸಲಾಗಿದೆ. ಇವರು ವಾಯ್ಸ್ ಆಫ್ ಟ್ರುಥ್ ಎಂಬ ವಾಟ್ಸ್ ಪ್ ಗುಂಪು ರಚಿಸಿದ್ದು , ಬಳಿಕ ಎಲ್ಲಾ ಗುಂಪುಗಳಿಗೆ ರವಾನಿಸಿದ್ದರು. ಇದರಲ್ಲಿ 16 ವರ್ಷದ ಬಾಲಕ ಕೂಡಾ ಒಳಗೊಂಡಿದ್ದು , ಈತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇವರು ರಚಿಸಿ ಕಳುಹಿಸಿದ ಸಂದೇಶ ರಾಜ್ಯದುದ್ದಕ್ಕೂ ವಾಟ್ಸ್ ಪ್ ಗಳಿಗೆ ರವಾನೆ ಯಾಗಿತ್ತು . ಮಾತ್ರವಲ್ಲ 16 ರಂದು ಕಾಸರಗೋಡು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅಘೋಷಿತ ಹರತಾಳ ಹಾಗೂ ಹಿಂಸಾತ್ಮಕ ಘಟನೆಗಳು ನಡೆದಿದ್ದವು .ಅಘೋಷಿತ ಹರತಾಳ ಪೊಲೀಸರಿಗೆ ತಲೆನೋವು ಉಂಟು ಮಾಡಿತ್ತು . ಕೇವಲ ವಾಟ್ಸ್ ಪ್ ಸಂದೇಶದ ಮೂಲಕ ನಡೆದ ಹರತಾಳ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು . ಗಲಭೆ ಎಬ್ಭಿಸುವ ಸಂಚು ಇದರ ಹಿಂದೆ ನಡೆದಿತ್ತು ಎಂಬ ಮಾಹಿತಿ ಕೂಡಾ ಪೊಲೀಸರಿಗೆ ಲಭಿಸಿತ್ತು, ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು , ಒಂದು ಸಾವಿರಕ್ಕೂ ಅಧಿಕ ಮಂದಿ ಬಗ್ಗೆ ನಿಗಾ ಇರಿಸಿದ್ದಾರೆ . ಇವರನ್ನು ಶೀಘ್ರ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.