ಕಾಸರಗೋಡು, ಆ 04(DaijiworldNews/HR): ಕಾಸರಗೋಡು: ವ್ಯಕ್ತಿಯೋರ್ವ ಸೋಮವಾರ ಪೈವಳಿಕೆ ಪಂಚಾಯತ್ ಬಾಯಾರು ಕನಿಯಾಲದ ಗುರಿಮೇರಿನಲ್ಲಿ ತನ್ನ ಮೂವರು ಮಾವಂದಿರು ಮತ್ತು ಚಿಕ್ಕಮ್ಮನನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದು ಮದುವೆ ಮಾಡಿಸಿಲ್ಲ ಎಂಬ ಕೋಪದಿಂದ ಈ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.



ಉದಯ(45) ಎಂಬಾತ ಕೊಲೆ ಆರೋಪಿಯಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿರುವ ಸಹೋದರರಾದ ಬಾಬು (65), ವಿಠಲ (60), ಸದಾಶಿವ (55), ದೇವಕಿ (58) ಮೃತಪಟ್ಟವರು.
ತನ್ನ ಹತ್ತಿರದ ನಾಲ್ವರು ಸಂಬಂಧಿಕರನ್ನು ಕೊಂದ ಉದಯ, ತಾಯಿ ಲಕ್ಷ್ಮಿಯನ್ನು ಕೂಡ ಹತ್ಯೆಗೈಯಲು ಯತ್ನಿಸಿದ್ದು ತಾಯಿ ತಪ್ಪಿಸಿಕೊಂಡು ಹತ್ತಿರದ ಮನೆಗೆ ಓಡಿ ಹೋಗಿದ್ದಾರೆ. ಬಳಿಕ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅವಿವಾಹಿತರಾಗಿರುವ ಉದಯ, ಕಳೆದ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ, ತನಗೆ ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ ತಮ್ಮ ಸಂಬಂಧಿಕರೆಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆದರೆ ಅವನ ಮಾತನ್ನು ಯಾರೂ ಕೂಡಾ ಗಣನೆಗೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ಆರೋಪಿಯ ಮಾವ ವಿಠಲ ಎಂಬವರು ಬೇರೆಯವರ ಕೊಡಲಿಗಳಿಗೆ ಹಿಡಿ ಹಾಕುವುದು ಹಾಗೂ ಹರಿತ ಮಾಡಿ ಕೊಡುವ ಕೆಲಸಗಳನ್ನೂ ಮಾಡುತ್ತಿದ್ದು, ಅದಕ್ಕೆಂದು ತಂದಿದ್ದ ಕೊಡಲಿಗಳು ಮನೆಯಲ್ಲಿದ್ದವು. ಆರೋಪಿಯು ಏಕಾಏಕಿ ಅದರಲ್ಲೊಂದು ಕೊಡಲಿಯನ್ನು ಹಿಡಿದು ಎಲ್ಲರನ್ನು ಕಡಿಯಲಾರಂಬಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.
ಬಳಿಕ ಆರೋಪಿಯು ಅರ್ಧ ಕಿ.ಮೀ ದೂರ ಓಡಿ ಪರಾರಿಯಾಗಲೆತ್ನಿಸಿದ್ದು ಅಷ್ಟರಲ್ಲೇ ಕಟ್ಟತ್ತಾರಿನಿಂದ ಹಿಡಿದು ರಿಕ್ಷಾದಲ್ಲಿ ಮನೆಗೆ ಕರೆ ತರಲಾಗಿದೆ. ಆರೋಪಿಯು ಮತ್ತೆ ಪರಾರಿಯಾಗಲು ಪ್ರಯತ್ನಿಸಿದ್ದು ಆಗ ಹಗ್ಗದಲ್ಲಿ ಕಟ್ಟಿಹಾಕಿ ಪೊಲೀಸರಿಗೊಪ್ಪಿಸಲಾಗಿದೆ.
ಕಾಸರಗೋಡು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.