ಬೆಂಗಳೂರು, ಏ 22: ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಪಕ್ಷೇತರರಾಗಿ ಚುನಾವಣೆ ಎದುರಿಸುವ ಹೇಳಿಕೆಯನ್ನು ಈ ಹಿಂದೆ ನೀಡಿದ್ದರು. ನಂತರ ಅವರು ಜೆಡಿಎಸ್ ಸೇರುವ ಉಹಾಪೋಹಗಳಿದ್ದರೂ, ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಬಗ್ಗೆ ಹಸಿರು ನಿಶಾನೆ ತೋರಿಸಿದ್ದರು. ಇದೀಗ ಏ.22ರ ಭಾನುವಾರ ಬೆಂಗಳೂರಿನ ಕೆ ಪಿ ಸಿ ಸಿ ಕಚೇರಿ ಯಲ್ಲಿ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಾಂಗ್ರೆಸ್ ನ ಹಲವು ನಾಯಕರ ಸಮ್ಮುಖದಲ್ಲಿ ಇಂದು ಅಧಿಕೃತ ವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ನಾನು ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ, ನನಗೆ ಟಿಕೆಟ್ ನೀಡದೆ ವಂಚಿಸಿದ್ದಾರೆ ಹೀಗಾಗಿ ಪಕ್ಷದ ವಂಚನೆಯಿಂದ ನೊಂದಿರುವ ನಾನು, ಇಂದು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನ್ನ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವುದು ನನ್ನ ಮುಂದಿನ ಗುರಿ ಎಂದರು .
ಇನ್ನು ಬೇಳೂರು ಗೋಪಾಲಕೃಷ್ಣ 2004 ಮತ್ತು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ತಮ್ಮ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರಿಗೆ ಸೋಲಿನ ರುಚಿ ತೋರಿಸಿದ್ದರು. 2013ರಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.