ಬೆಳ್ತಂಗಡಿ, ಆ. 04 (DaijiworldNews/MB) : ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ-ಮಳೆಗೆ ಬೆಳ್ತಂಗಡಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ತೆಂಕಕಾರಂದೂರು ಪೆರಳ್ದರಕಟ್ಟೆ ಮಂಜೊಟ್ಟಿ ತಿರುವು ಬಳಿ ತೆಂಕಕಾರಂದೂರಿನ ಅಬೂಬಕ್ಕರ್ ಚಲಾಯಿಸುತ್ತಿದ್ದ ರಿಕ್ಷಾದ ಮೇಲೆ ರಸ್ತೆ ಬದಿಯಲ್ಲಿದ್ದ ಮರವೊಂದು ಬಿದ್ದು, ರಿಕ್ಷಾ ಜಖಂಗೊಂಡಿದೆ.

ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತಂತಿಗಳು ವಾಲಿದ್ದು, ಸುದೈವವಶಾತ್ ರಿಕ್ಷಾ ಚಾಲಕ ಅಬೂಬಕ್ಕರ್ ಅಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳು ಸ್ಥಗಿತಗೊಂಡಿದ್ದವು. ಸ್ಥಳೀಯ ಯುವಕರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸೇರಿ ಬಿದ್ದ ಮರವನ್ನು ತೆರವು ಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಈ ಹೆದ್ದಾರಿಯ ಬದಿಯಲ್ಲಿ ಹತ್ತಾರು ಮರಗಳು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು; ಇಂತಹ ಮರಗಳ ತೆರವಿಗೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಇನ್ನಷ್ಟು ಅವಘಡವಾಗುವುದನ್ನು ತಪ್ಪಿಸಬೇಕಾಗಿದೆ.