ಬೆಳ್ತಂಗಡಿ, ಆ. 04 (DaijiworldNews/MB) : ಮಂಗಳವಾರದಂದು ಸುರಿದ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ಮನೆಯೊಂದರ ಮೇಲ್ಛಾವಣಿಯು ಮಳೆಯಬ್ಬರಕ್ಕೆ ತಡೆದು ನಿಲ್ಲಲಾಗದೇ ಕುಸಿದು ಬಿದ್ಧ ದುರ್ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೂರು ಗ್ರಾಮದ ಪರಂಬುಡೆಯಲ್ಲಿ ಸಂಭವಿಸಿದೆ. ಈ ಸಂದರ್ಭ ಮನೆಯೊಳಗಿದ್ದ ಐವರೂ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ.

ದುರ್ಘಟನೆಯಲ್ಲಿ ಮಣ್ಣಿನ ಗೋಡೆಯ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು, ಹೆಂಚುಗಳೆಲ್ಲಾ ಪುಡಿಪುಡಿಯಾಗಿದೆ. ಮನೆಯ ಯಜಮಾನ ಅಣ್ಣಿ ಆಚಾರ್ಯರ ಕೈಗೆ ಸಣ್ಣ ಪ್ರಮಾಣದ ಗಾಯವಾಗಿದೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾದೇವ ಗಡೇಗಾರ್ ಮತ್ತು ಸಿಬ್ಬಂದಿಗಳು, ಸ್ಥಳೀಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತಾತ್ಕಾಲಿಕ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ.
ದುರ್ಘಟನೆಯ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜಾ, ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಸದ್ಯ ಸಂತ್ರಸ್ತರಿಗೆ ಗುರುವಾಯನಕೆರೆ ನಿವಾಸಿ ಪುರುಷೋತ್ತಮ ಆಚಾರ್ಯ ಅವರ ಮುಂಡೂರಿನ ಮನೆಯಲ್ಲಿ ತಾತ್ಕಾಲಿಕ ವಾಸಕ್ಕೆ ಅವಕಾಶ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.
ಇನ್ನು ಬೆಳ್ತಂಗಡಿ ತಾಲೂಕಿನಲ್ಲಿ ಆಗಸ್ಟ್ 3ರ ಸೋಮವಾರದಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ತಾಲೂಕಿನ ಹಲವಡೆ ಅವಘಡ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು, ಪಡಂಗಡಿ ಗ್ರಾಮದ ಕನ್ನಡಿಕಟ್ಟೆಯಲ್ಲರುವ ರಬ್ಬರ್ ನರ್ಸರಿ ಮುಂಭಾಗದಲ್ಲಿ ಗುರುವಾಯನಕೆರೆ ವಿದ್ಯುತ್ ಸಬ್ಸ್ಟೇಷನ್ ನಿಂದ ವೇಣೂರು ಸಬ್ಸ್ಟೇಷನ್ ಗೆ ಹೋಗುವ 33 ಕೆ.ವಿ. ವಿದ್ಯುತ್ ಕಂಬ ಆಗಸ್ಟ್ 4ರ ಬೆಳಿಗ್ಗೆ ಚಲಿಸುತ್ತಿದ್ದ ಪಿಕ್ಅಪ್ ವಾಹನದ ಮೇಲೆ ಬಿದ್ದು ವಾಹನ ಜಖಂಗೊಂಡಿದ್ದು, ಪುಣ್ಯವಶಾತ್ ವಾಹನದಲ್ಲಿದವರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಾಳಾಗಲಿಲ್ಲ. ವಿದ್ಯುತ್ ಕಂಬ ಬಿದ್ದ ರಭಸಕ್ಕೆ ವಿದ್ಯುತ್ ಲೈನ್ ಟ್ರಿಪ್ ಆದದ್ದರಿಂದ ಯಾವುದೇ ವಿದ್ಯುತ್ ಅವಘಡ ಸಂಭವಿಸಿ ವಾಹನದಲ್ಲಿದ್ದವರಿಗೆ ಪ್ರಾಣಾಪಾಯವಾಗಿಲ್ಲ.

ಈ ವಿದ್ಯುತ್ ಕಂಬಗಳನ್ನು ಸರಿಯಾದ ರೀತಿಯಲ್ಲಿ ಅಂತರ ಕಾಯ್ದುಕೊಳ್ಳದೆ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಕಡೆಗಳಲ್ಲಿ ಹಾಕಿದ್ದು; ರಸ್ತೆ ಅಗಲೀಕರಣವಾಗುವ ವೇಳೆ ಈ ವಿದ್ಯುತ್ ಕಂಬಗಳನ್ನು ಬೇರೆಡೆಗೆ ವರ್ಗಾಯಿಸಲು ಆದೇಶ ಮಾಡಿದ್ದರೂ ಕೂಡ ಅದನ್ನು ಮತ್ತೆ ಸರಿಯಾದ ಸ್ಥಳದಲ್ಲಿ ಹಾಕದೆ ಅಲ್ಲಿಯೇ ಬಿಟ್ಟಿದ್ದಾರೆ. ಪರಿಣಾಮವಾಗಿ ಕಂಬಗಳ ಬುಡಗಳಲ್ಲಿ ನೀರು ನಿಂತು, ಮಣ್ಣಿನ ಹಿಡಿತ ಕಳಕೊಂಡ ಕಂಬಗಳು ಬೀಳುತ್ತಿದೆ. ಇದರ ಪಕ್ಕದಲ್ಲಿ ಇನ್ನೊಂದು ವಿದ್ಯುತ್ ಲೈನ್ ಕೂಡ ಹಾದುಹೋಗಿದ್ದು, ಸಾಕಷ್ಟು ಕಂಬಗಳು ಬಿಳುವ ಸ್ಥಿತಿಯಲ್ಲಿದೆ. ಪರಿಸರದ ನಿವಾಸಿಗಳು ಇದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸರಿಯಾದ ಸ್ಥಳಗಳಲ್ಲಿ ಸರಿಯಾದ ಕ್ರಮದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.