ಕುಂದಾಪುರ, ಆ. 04 (DaijiworldNews/SM): ಕಳೆದ ಎರಡು ದಿನದಿಂದ ಕರಾವಳಿಯಲ್ಲಿ ಬೋರ್ಗರೆದು ಮಳೆ ಸುರಿಯುತ್ತಿದೆ. ಈ ನಡುವೆ ಆ.೪ರ ಮಂಗಳವಾರ ಕುಬ್ಜಾ ನದಿಯ ನೀರು ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದೆ. ಮಂಗಳವಾರ ಸಂಜೆ ಕುಬ್ಜಾ ನದಿ ನೀರು ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ್ದು, ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯನ್ನು ಅಭಿಷೇಕಗೈದಿದೆ.




ಕುಬ್ಜಾ ನದಿ ದೇವಿ ಪಾದ ತೊಳೆಯುವುದು ಸುದಿನವಾಗಿದ್ದು, ಈ ದಿನ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿ ಪಾದ ತೊಳೆಯುತ್ತಾಳೆ ಎನ್ನೋದು ಭಕ್ತರ ನಂಬಿಕೆಯಾಗಿದೆ. ಇದರ ಜೊತೆಗೆ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ವಾಡಿಕೆಯೂ ಆಗಿದೆ.
ಈ ಹಿಂದೆ ಕಮಲಶಿಲೆಗೆ ಕುಬ್ಜಾ ನದಿ ನೀರು ನುಗ್ಗಿ ದೇವಿ ಪಾದ ತೊಳೆಯುವುದು ಭಕ್ತರ ಪಾಲಿನ ಸುದಿನವಾಗಿತ್ತು. ಊರ-ಪರವೂರ ಭಕ್ತಾಧಿಗಳು ಈ ದಿನಕ್ಕಾಗಿ ಕಾದು ಆ ಸಮಯಕ್ಕೆ ಸ್ಥಳಕ್ಕೆ ಬಂದು ತಾವು ಕೂಡ ಪವಿತ್ರ ಸ್ನಾನ ಮಾಡಿ ಸಂತ್ರಪ್ತರಾಗುತ್ತಿದ್ದರು. ಆದರೆ ಈ ಬಾರಿ ಕೊರೋನಾ ಭಯದ ನಡುವೆ ಭಕ್ತಾದಿಗಳ ಆಗಮನ ಇರಲಿಲ್ಲ.
ಮಂಗಳವಾರ ಸಂಜೆ ದೇವಸ್ಥಾನ ಪ್ರವೇಶಿಸಿದ ಕುಬ್ಜೆಯ ಪವಿತ್ರ ಸ್ನಾನಕ್ಕೆ ಈ ಬಾರಿ ಬೆರಳೆಣಿಕೆಯ ಸ್ಥಳೀಯ ಭಕ್ತರು ಮಾತ್ರ ಆಗಮಿಸಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವರ ದರ್ಶನ ಭಕ್ತರು ಪಡೆದರು. ದೇವಳದ ಮೊಕ್ತೇಸರರು, ಅರ್ಚಕ ವರ್ಗದವರು ಮತ್ತು ಸಿಬ್ಬಂದಿಗಳು ಮಾತ್ರ ಈ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿದ್ದರು.