ಮಂಗಳೂರು, ಆ. 04 (DaijiworldNews/SM): ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ನೆರವಾಗುವ ನಿಟ್ಟಿನಲ್ಲಿ 2008ರಲ್ಲಿ ಎನ್ ಆರ್ ಐ ಫೋರಂ ಆಫ್ ಕರ್ನಾಟಕ ಸ್ಥಾಪನೆಗೊಂಡಿದ್ದು, ಇದಕ್ಕೆ ಗ್ರಹಣ ಹಿಡಿದಿದೆ. ಕಳೆದ 2 ವರ್ಷಗಳಿಂದ ಫೋರಂಗೆ ಉಪಾಧ್ಯಕ್ಷರನ್ನು ನೇಮಿಸಿಲ್ಲ. ಇದರ ಪರಿಣಾಮದಿಂದಾಗಿ ಫೋರಂ ಅಸ್ತಿತ್ವದಲ್ಲಿದ್ದರೂ ಉಸಿರಾಡದ ಪರಿಸ್ಥಿತಿಯಲ್ಲಿದೆ.

ನೆರೆ ರಾಜ್ಯಗಳಾದ ಕೇರಳ, ತಮಿಳುನಾಡುವಿನಲ್ಲಿ ಈಗಾಗಲೇ ಆರಂಭಗೊಂಡಿರುವ ಫೋರಂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಅಲ್ಲದೆ, ಸಂಕಷ್ಟದಲ್ಲಿದ್ದವರಿಗೆ ಉತ್ತಮ ರೀತಿಯಲ್ಲಿ ನೆರವಾಗುತ್ತಿದೆ. ವಿದೇಶದಲ್ಲಿರುವ ತಮ್ಮ ರಾಜ್ಯದವರಿಗೆ ತುರ್ತು ಸಂದರ್ಭಗಳಲ್ಲಿ ನೆರವಾಗುತ್ತಿದೆ. ಇದನ್ನು ಗಮನಿಸಿದ ಬಳಿಕ ಕರ್ನಾಟಕದಲ್ಲೂ ಅದೇ ರೀತಿಯ ಫೋರಂ ನಿರ್ಮಿಸಬೇಕೆಂಬ ಕೂಗಿ ಕೇಳಿ ಬಂದಿತ್ತು. ಅದರಂತೆ ೨೦೦೮ರಲ್ಲಿ ಫೋರಂ ಆರಂಭಗೊಂಡಿತ್ತು. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಫೋರಂ ರಚಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ ಅವರು ಮೊದಲ ಉಪಾಧ್ಯಕ್ಷರಾಗಿದ್ದರು. ಸರಕಾರದ ನಿರ್ಧಾರಕ್ಕೆ ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರು ಸ್ವಾಗತಿಸಿದ್ದರು.
ಅದಾದ ಬಳಿಕ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರಕಾರವೂ ಕೂಡ ಫೋರಂಗೆ ಶಕ್ತಿ ತುಂಬುವ ಕಾರ್ಯ ಮಾಡಿತ್ತು. ಆಸ್ಟ್ರೇಲಿಯಾದ ಅನಿವಾಸಿ ಕನ್ನಡಿಗ ಪ್ರಕಾಶ್ ಎಂಬವರನ್ನು ಸಿದ್ಧರಾಮಯ್ಯ ಸರಕಾರ ಫೋರಂಗೆ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. ಆದರೆ, ಅವರ ಕಾರ್ಯ ಕ್ಷಮತೆಯ ಬಗ್ಗೆ ಆರೋಪಗಳು ದೂರುಗಳು ಬಂದ ಹಿನ್ನೆಲೆಯಲ್ಲಿ ಬದಲಾವಣೆ ತಂದು ಅಮೇರಿಕಾದಲ್ಲೇ ಇದ್ದ ಅನಿವಾಸಿ ಕನ್ನಡಿಗರಾದ ಆರತಿ ಕೃಷ್ಣ ಅವರನ್ನು ನೇಮನ ಮಾಡಲಾಗಿತ್ತು.
ಬಳಿಕ 2018ರಲ್ಲಿ ಸಿದ್ದರಾಮಯ್ಯ ಸರಕಾರ ಪತನಗೊಂಡು ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಂಇ ಅವರ ಮೇಲೆ ಒತ್ತಡಗಳು ಕೇಳಿಬಂದಿದ್ದವು. ಆದರೆ, ಕೆಲವೊಂದು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ, ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಧಿಕಾರದ ಗದ್ದುಗೆ ಏರಿ ವರ್ಷ ಕಳೆದಿದೆ. ಆದರೆ, ಎನ್ ಆರ್ ಐ ಫೋರಂ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಂತಿಲ್ಲ. ಅಲ್ಲದೆ, ಇತ್ತೀಚಿಗಷ್ಟೇ ನಿಗಮ ಮಂಗಳಿಗಳಿಗೆ ನೇಮಕಾತಿ ನಡೆಸಲಾಗಿದ್ದು, ಇಲ್ಲಿಯೂ ಕೂಡ ಈ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಇದು ವಿದೇಶದಲ್ಲಿರುವ ಲಕ್ಷಾಂತರ ಕನ್ನಡಿಗರಿಗೆ ಅಸಮಾಧಾನವನ್ನುಂಟು ಮಾಡಿದೆ.
ಕೊರೊನಾದ ಸಂದಿಗ್ದ ಪರಿಸ್ಥಿತಿಯಲ್ಲಿ ವಿದೇಶಗಳಲ್ಲಿ ಅನೇಕರು ಸಂಕಷ್ಟದಲ್ಲಿದ್ದು, ಅವರಿಗೆ ಧ್ವನಿಯಾಗಲು ಯಾರೂ ಇಲ್ಲದಂತಾಗಿದೆ. ಎನ್ ಆರ್ ಐ ಫೋರಂ ಅಸ್ತತ್ವದಲ್ಲಿದ್ದರೂ ಕೆಲಸಕ್ಕಿಲ್ಲದಂತಾಗಿದೆ. ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಅನಿವಾಸಿ ಕನ್ನಡಿಗರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದು, ಸರಕಾರ ನೆರವಾಗುವುದರೊಂದಿಗೆ ಎನ್ ಆರ್ ಐ ಫೋರಂಗೆ ಉಪಾಧ್ಯಕ್ಷರನ್ನು ನೇಮಿಸಲೇ ಬೇಕಾಗಿದೆ.