ಸುಬ್ರಹ್ಮಣ್ಯ, ಆ. 05 (DaijiworldNews/MB) : ಪಶ್ಚಿಮಘಟ್ಟ ಪ್ರದೇಶದಲ್ಲಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸುಬ್ರಹ್ಮಣ್ಯ ಪರಿಸರದಲ್ಲೂ ಬೆಳಿಗ್ಗೆಯಿಂದ ನಿರಂತರ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.





ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಮಾರಧಾರಾ ನದಿಯ ಹೊಸಮಠ ಹಾಗೂ ನೇತ್ರಾವತಿ ನದಿಯಲ್ಲೂ ನೀರಿನ ಮಟ್ಟ ಬಹಳವಾಗಿ ಏರಿಕೆಯಾಗಿ ಹರಿಯುತ್ತಿದೆ. ಇದೇ ತರಹ ಮಳೆ ಮುಂದುವರೆದದ್ದೇ ಆದಲ್ಲಿ ಬೆಳಗಿನ ವೇಳೆಗೆ ಕೆಳಮಟ್ಟದ ಹಲವಾರು ಸೇತುವೆಗಳು ಮುಳುಗಡೆ ಹೊಂದಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ನದಿ ತೀರದ ಬಹುತೇಕ ಎಲ್ಲಾ ಕೃಷಿ ಭೂಮಿಗಳಿಗೂ ನೀರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ.