ಸುರತ್ಕಲ್ ಸೆ21: ಇಲ್ಲಿ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್ ಕೇಂದ್ರವನ್ನು ತಕ್ಷಣ ಮುಚ್ಚುವಂತೆ ಇಂದು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಕೂಳೂರು- ಪಣಂಬೂರು -ಬೈಕಂಪಾಡಿ - ಸುರತ್ಕಲ್ ಹಾದುಹೋಗುವ ಹೆದ್ದಾರಿಯನ್ನು ದುರಸ್ಥಿಪಡಿಸಬೇಕು ಎನ್ನುವ ಆಗ್ರಹವೂ ಕೇಳಿಬಂತು.
ಆ ಬಳಿಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ಮಾತನಾಡಿ, ’ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್ ಗಳ ನಡುವೆ ಕನಿಷ್ಠ 50 ಕಿ.ಮೀ ಅಂತರ ಇರಬೇಕು. ಆದರೆ 10 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿರುವ ಹೆಜಮಾಡಿ ಹಾಗೂ ಸುರತ್ಕಲ್ ಗಳಲ್ಲಿ ಎರಡು ಟೋಲ್ ಗೇಟ್ ಗಳು ಸುಂಕ ವಸೂಲಿ ಮಾಡುತ್ತಿವೆ. ಆದ್ದರಿಂದ ಸುರತ್ಕಲ್ ನ ಟೋಲ್ ಗೇಟ್ ಅನ್ನು ಈ ಕೂಡಲೇ ಮುಚ್ಚಬೇಕು ಹಾಗೂ ಹೆದ್ದಾರಿಯನ್ನು ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿದರು. ಇನ್ನು ಈ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.