ಕಾಸರಗೋಡು, ಏ 22: ನಿರ್ಮಾಣ ಹಂತದ ಮನೆಯಲ್ಲಿ ಕಾರ್ಮಿಕನೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಪ್ಪಳ ಸಮೀಪದ ಬೇಕೂರಿನಲ್ಲಿ ನಡೆದಿದ್ದು, ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.ತಲೆಯಲ್ಲಿ ಗಂಭೀರ ಸ್ವರೂಪದ ಗಾಯ ಕಂಡುಬಂದಿದ್ದು , ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಬೇಕೂರು ಅಗರ್ತಿಮೂಲೆಯ ಗಾರೆ ಕಾರ್ಮಿಕ ಗಿರೀಶ್ (43) ಮೃತಪಟ್ಟ ಕಾರ್ಮಿಕ. ಬೇಕೂರು ಶಾಲೆ ಸಮೀಪ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ತಲೆ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ರಾತ್ರಿ ಆಹಾರ ಸೇವಿಸಲೂ ತೆರಳಿದ್ದ ಗಿರೀಶ್ ತನ್ನ ಸ್ಕೂಟರ್ ನಲ್ಲಿ ತಡರಾತ್ರಿಯಾದರೂ ಮರಳದಿರುವುದರಿಂದ ಹುಡುಕಾಟ ನಡೆಸಿದ್ದು , ಈ ನಡುವೆ ಇಂದು ಬೇಕೂರು ಸಮೀಪದ ನಿರ್ಮಾಣ ಹಂತದ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿದು ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.