ಉಡುಪಿ, ಆ. 05 (DaijiworldNews/MB) : ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಕಾರ್ಯಕ್ರಮದ ನಿರ್ವಿಘ್ನತಾ ಸಿದ್ಧಿ, ಶಿಲಾನ್ಯಾಸ ಮುಹೂರ್ತದಲ್ಲಿನ ಎಲ್ಲ ದೋಷ ನಿವಾರಣೆಯಾಗಿ ಶುಭ ಅಮೃತ ಘಳಿಗೆಯ ಪ್ರಾಪ್ತಿ, ಅತೀ ಶೀಘ್ರ ಸುಸೂತ್ರವಾಗಿ ಭವ್ಯ ಮಂದಿರ ನಿರ್ಮಾಣವಾಗಿ ಸಮಸ್ತ ಲೋಕ ಕ್ಕೆ ಶ್ರೀ ಸೀತಾರಾಮದೇವರ ಪೂರ್ಣ ಕೃಪೆ ಪ್ರಾಪದತಿಯಾಗುವಂತೆ ಪ್ರಾರ್ಥಿಸಿ, ರಾಮಮಂದಿರ ನತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾತುರ್ಮಾಸ್ಯ ನಿಮಿತ್ತ ಅಯೋಧ್ಯೆಗೆ ತೆರಳದೇ ಉಡುಪಿ ಸಮೀಪದ ನೀಲಾವರ ಗೋಶಾಲೆಯ ಆವರಣದ ಶಾಖಾ ಮಠದಲ್ಲಿ ನವಗ್ರಹ ಯಾಗ, ಬಳಿತ್ಥಾ ಸೂಕ್ತ ಹೋಮ, ರಾಮತಾರಕ ಮಂತ್ರ ಯಾಗವನ್ನು ವೈದಿಕರ ಮೂಲಕ ನೆರವೇರಿಸಿದರು.



ಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರಿಗೆ ಲಕ್ಷೋಪಲಕ್ಷ ತುಲಸೀ ಅರ್ಚನೆಯನ್ನು ವಿಪ್ರರ ವಿಷ್ಣು ಸಹಸ್ರನಾಮಾವಳಿ ಪಠನ ಸಹಿತ ನೆರವೇರಿಸಿದರು. ಬಳಿಕ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಪಟ್ಟದ ದೇವರ ಮಂಟಪದ ಕೆಳಭಾಗದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನಿಟ್ಟು ತುಲಸೀ ಅರ್ಪಿಸಿ ಗುರುಗಳಿಗೂ ಮಂಗಳಾರತಿ ಬೆಳಗಿ ಗೌರವ ಅರ್ಪಿಸಿದರು. ಗೋವುಗಳಿಗೆ ಗೋಗ್ರಾಸ ಸಮರ್ಪಣೆಯನ್ನೂ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು. ಬಳಿಕ ಅಯೋಧ್ಯೆಯ ಕಾರ್ಯಕ್ರಮವನ್ನು ಶ್ರೀಗಳು ದೂರದರ್ಶನ ನೇರ ಪ್ರಸಾರದ ಮೂಲಕ ವೀಕ್ಷಿಸಿ ಸಂತೋಷಪಟ್ಟರು. ಭಕ್ತಾದಿಗಳಿಗೆ ಅನ್ನರಾಧನೆ ನಡೆಯಿತು.